ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜೂನ್ 4ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಗಟನೆಗಳಿಂದ ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಜೂನ್ 3ರ ಸಂಜೆ 6 ರಿಂದ ]5ರ ಬೆಳಗ್ಗೆ 6ಗಂಟೆವರೆಗೆ ನಿಷೇಧಾಜ್ಞೆಯನ್ನು ತಹಸೀಲ್ದಾರ್ ಶ್ವೇತಾ ರವೀಂದ್ರ ಜಾರಿ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯನ್ನು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಕೆಡವಿ ಕಟ್ಟಲಾಗಿದೆ. ಇಂದಿಗೂ ಅಲ್ಲಿ ದೇಗುಲದ ಕುರುಹುಗಳು ಇವೆ. ಹೀಗಾಗಿ ಅಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶಮಾಡಿಕೊಡುವ ಜತೆಗೆ ಉತ್ಖನನ, ವಿಡಿಯೋಗ್ರಫಿ ಸಮೀಕ್ಷೆ ಮಾಡಿ, ಮುಸಲ್ಮಾನರ ಮದರಸಾ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿ ಹೋರಾಟ ಮಾಡಲು ಮುಂದಾಗಿತ್ತು. ಹೀಗಾಗಿ ವಿಶ್ವ ಹಿಂದೂ ಪರಿಷತ್ ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಹಸೀಲ್ದಾರ್ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಶನಿವಾರ ಬೆಳಗ್ಗೆ 10.30ಕ್ಕೆ ಶ್ರೀರಂಗಪಟ್ಟಣದ ಬಸ್ ನಿಲ್ದಾಣದ ಎದುರು ಇರುವ ಕುವೆಂಪು ವೃತ್ತದಿಂದ ಮಸೀದಿವರೆಗೆ ವಿಹಿಂಪ, ಬಜರಂಗದಳ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಮಾಡಲು ನಿರ್ಧರಿಸಿವೆ. ಆದರೆ, ನಿಷೇಧಾಜ್ಞೆ ಸಮಯದಲ್ಲಿ ಮೆರವಣಿಗೆ, ಪ್ರತಿಭಟನೆ ಮೆರವಣಿಗೆ ನಡೆಸದಂತೆ ತಹಸೀಲ್ದಾರ್ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಷೇಧಾಜ್ಞೆ ಆದೇಶ ಪ್ರತಿಯಲ್ಲಿ ಜಾಮಿಯಾ ಮಸೀದಿ ಎಂದು ನಮೂದಿಸಿ, ಅವರಣದಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇಗುಲ ಎಂದು ಕೂಡ ಹಾಕುವ ಮೂಲಕ ತಾಲೂಕು ಆಡಳಿತ ಎಡವಟ್ಟು ಮಾಡಿಕೊಂಡಿದೆ. ಇದು ಹಿಂದೂ ಸಂಘಟನೆಗಳ ಹೋರಾಟಕ್ಕೆ ಪುಷ್ಟಿ ನೀಡಿದಂತೆಯೇ ಆಗಿದೆ ಎನ್ನಲಾಗಿದೆ.
ನಿಷೇಧಾಜ್ಞೆ ಬಗ್ಗೆ ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಕರೆಕೊಟ್ಟಿರುವ ಶ್ರೀರಂಗಪಟ್ಟಣ ಚಲೋ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಜಾಮಿಯಾ ಮಸೀದಿಯು ಮೂಡಲ ಬಾಗಿಲು ಆಂಜನೇಯ ದೇಗುಲದ ಮೂಲ ಮಂದಿರವಾಗಿದೆ. ಅದು ಜಿಲ್ಲಾಡಳಿತಕ್ಕೂ ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದಲೇ 144 ಸೆಕ್ಷನ್ ಆದೇಶ ಪ್ರತಿಯಲ್ಲಿ ದೇಗುಲದ ಹೆಸರು ಉಲ್ಲೇಖಿಸುವ ಮೂಲಕ ಒಪ್ಪಿಕೊಂಡಿದೆ. ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದೆ. ಅದನ್ನು ತೆರವುಗೊಳಿಸುವಂತೆ ಹತ್ತಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕುರುಡಾಗಿ ಕುಳಿತಿರುವ ಜಿಲ್ಲಾಡಳಿತಕ್ಕೆ ಕಾನೂನು ಚಾಟಿ ಬೀಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ | ಬೆಳಗಾವಿ ವಿವಾದ ತಾರಕಕ್ಕೆ: ಬ್ರಾಹ್ಮಣರು-ಮುಸ್ಲಿಮರು ಕಟ್ಟಿಸಿದ ಮಸೀದಿ ಎಂದ ಮುಸ್ಲಿಂ ಲೀಗ್