ಹೊಸಪೇಟೆ: ನಗರ ಸೇರಿದಂತೆ ವಿಜಯನಗರ ಕ್ಷೇತ್ರದ (Vijayanagara constituency) ಅಭಿವೃದ್ಧಿಯನ್ನು ಒಮ್ಮೆ ಅವಲೋಕಿಸಿ ಮತದಾನ (Vote) ಮಾಡಿ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಮತದಾರರಲ್ಲಿ ಮನವಿ ಮಾಡಿದರು.
ನಗರದ 35ನೇ ವಾರ್ಡಿನ ಪಾರ್ವತಿ ನಗರದಲ್ಲಿ ಶುಕ್ರವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ವಿಜಯನಗರ ಕ್ಷೇತ್ರದ ಪರಿಚಯ ತಮಗಿರುತ್ತೆ. ಆನಂದ್ ಸಿಂಗ್ ಅವರಿಗೆ ನೀವು ಆಶೀರ್ವದಿಸಿದ ಬಳಿಕ ಇಲ್ಲಿ ಅಭಿವೃದ್ಧಿಯ ಪರ್ವವೇ ಶುರುವಾಗಿದ್ದಕ್ಕೆ ನಗರದ ಅಗಣಿತ ಪ್ರಗತಿಯೇ ಸಾಕ್ಷಿಯಾಗಿದೆ. ನಗರದ ಮುಖ್ಯ ರಸ್ತೆಗಳು, ವಾಡ್೯ ಒಳ ರಸ್ತೆಗಳನ್ನು ನೀವು ನೋಡಿದ್ದೀರಿ. ಇಂದಿನ ನಾಲ್ಕು ಸಾಲು ರಸ್ತೆ, ಬೀದಿ ದೀಪಗಳು, ಸಿಸಿ ರಸ್ತೆಗಳನ್ನು ನೋಡುತ್ತಿದ್ದೀರಿ. ಶಾಲಾ – ಕಾಲೇಜುಗಳು ಮೇಲ್ದರ್ಜೆಗೇರಿವೆ. ಗುಣಮಟ್ಟದ ಶಿಕ್ಷಣದ ಜತೆಗೆ ಮುಂದಿನ ಭವಿಷ್ಯದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: Team India : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಗೆ ಕೆ .ಎಲ್ ರಾಹುಲ್ ಔಟ್, ಸರ್ಜರಿ ಅನಿವಾರ್ಯ
ಸ್ಥಳೀಯ ನೂರು ಹಾಸಿಗೆಯನ್ನು ಮುನ್ನೂರು ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಪ್‌ಗ್ರೇಡ್ ಮಾಡಲಾಗಿದೆ. ನಗರ, ಗ್ರಾಮಗಳಲ್ಲಿ ಮೂಲ ಸೌಕರ್ಯ ಪ್ರಮಾಣ ಹೆಚ್ಚಿಸಿ ಶುದ್ಧ ಕುಡಿವ ನೀರಿನ ಸೌಲಭ್ಯವನ್ನು ಸಮರ್ಪಕಗೊಳಿಸಲಾಗಿದೆ ಎಂದು ಹೇಳಿದರು.
ವಿಶ್ವದ ಜನರನ್ನು ಸೆಳೆಯುತ್ತಿರುವ ಐತಿಹಾಸಿಕ ಹಂಪಿಯ ಜತೆಗೆ ಜೋಳದರಾಶಿ ಗುಡ್ಡವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಭಾರತದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭವನ್ನು ನಗರದ ಡಾ. ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಲಾಗಿದೆ, ಓದುಗರಿಗಾಗಿ ಜಿಲ್ಲಾ ಗ್ರಂಥಾಲಯ ನಿರ್ಮಾಣವಾಗಿದೆ.
ಹೀಗೆ ಹೇಳಲು ಹೊರಟರೆ ಸಚಿವ ಆನಂದ ಸಿಂಗ್ ಅವರು ಇಂತಹ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಹೆಸರಿಸಬಹುದು. ತಾವು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಪ್ರಗತಿಯ ಆಲೋಚನೆಯನ್ನು ಅನುಷ್ಠಾನಗೊಳಿಸುವವರಿಗೆ ನಿಮ್ಮ ಅಮೂಲ್ಯವಾದ ವೋಟ್ ಕೊಡಿ ಎಂದು ಸಿದ್ದಾರ್ಥ ಸಿಂಗ್ ಮನವಿ ಮಾಡಿದರು.
ಇದನ್ನೂ ಓದಿ: Sai Pallavi: ಹೊಸ ಸಿನಿಮಾ ಘೋಷಿಸಿದ ಸಾಯಿ ಪಲ್ಲವಿ!
ಬಿಜೆಪಿ ಮಂಡಲ ಅಧ್ಯಕ್ಷ ಕಾಸಟ್ಟಿ ಉಮಾಪತಿ ಮಾತನಾಡಿ, 70 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳು ಕೇವಲ 15 ವರ್ಷಗಳಲ್ಲಿ ಆಗಿವೆ. ಸಿದ್ದಾರ್ಥ ಸಿಂಗ್ ಉತ್ಸಾಹಿ ತರುಣರಿದ್ದು, ಇವರನ್ನು ಗೆಲ್ಲಿಸಿ ಕ್ಷೇತ್ರದ ಇನ್ನಷ್ಟು ಪ್ರಗತಿಗೆ ನಾಂದಿ ಹಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗುಡಗುಂಟಿ ಮಲ್ಲಿಕಾರ್ಜುನ, ಕೋರ್ ಕಮಿಟಿ ಸದಸ್ಯ ನಾಣಿಕೇರಿ ಸದಾಶಿವ, ಹಿರಿಯರಾದ ಕಿಚಡಿ ಶ್ರೀನಿವಾಸ್, ಯುವ ಮುಖಂಡರಾದ ರಾಘು, ಕಾಶಿ ಇತರರಿದ್ದರು.
ಇದನ್ನೂ ಓದಿ: IPL 2023: ಈ ಬಾರಿಯ ಐಪಿಎಲ್ನ ಚಾಂಪಿಯನ್ ತಂಡವನ್ನು ಹೆಸರಿಸಿದ ರವಿಶಾಸ್ತ್ರಿ
ಸೇಬಿನ ಹಾರ ಹಾಕಿ ಸ್ವಾಗತ
ಕ್ಷೇತ್ರದ 35ನೇ ವಾರ್ಡಿನ ಪಾರ್ವತಿ ನಗರ, 19ನೇ ವಾರ್ಡಿನ ವಿಜಯ ಟಾಕೀಸ್ ಬಳಿ ಹಾಗೂ ಕೌಲ್‌ಪೇಟ್‌ನಲ್ಲಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ರನ್ನು ಶುಕ್ರವಾರ ಸಂಭ್ರಮದಿಂದ ಬರಮಾಡಿಕೊಂಡರು. ವಿಜಯ ಟಾಕೀಸ್ ಬಳಿ ಸೇಬಿನ ಹಾರ ಹಾಕಿದ ಯುವಕರು, ಸಿದ್ಧಾರ್ಥ ಸಿಂಗ್ ಹಾಗೂ ಆನಂದ್ ಸಿಂಗ್ ಇರುವ ಚಿತ್ರಪಟವನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.