Site icon Vistara News

CM Siddaramaiah: ವಿದ್ಯುತ್‌, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

CM Siddaramaiah

ಚಾಮರಾಜನಗರ: ಬರಗಾಲದ ಕಾರಣದಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇನ್ನು ಕುಡಿಯುವ ನೀರಿಗೆ ಯಾವುದೆ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡಿದರು. ಜೂನ್‌ನಿಂದ ಆಗಸ್ಟ್‌ವರೆಗೂ ಅಗತ್ಯವಾದಷ್ಟು ಮಳೆ ಆಗದ ಕಾರಣದಿಂದ ಬರದ ಮತ್ತು ಸಂಕಷ್ಟದ ಪರಿಸ್ಥಿತಿ ಇದೆ. 161 ತೀವ್ರ ಬರಗಾಲ, 34 ತಾಲೂಕುಗಳು ಸಾಧಾರಣ ಬರಗಾಲದ ಸ್ಥಿತಿ ಇದೆ. ಇದಕ್ಕೆ ಇನ್ನಷ್ಟು ತಾಲ್ಲೂಕುಗಳು ಸೇರಬಹುದು. ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಡಿಸಿ, ಸಿಇಒ ಮತ್ತು ಉಸ್ತುವಾರಿ ಕಾಯದರ್ಶಿಗಳು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಬರಗಾಲದ ಕಾರಣದಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಕೆಲಸ ಹುಡುಕಿಕೊಂಡು ವಲಸೆ ಹೋಗುವ, ಗುಳೆ ತೆರಳುವ ಸ್ಥಿತಿ ಬಾರದಂತೆ, ನರೇಗಾ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. 150 ದಿನ ಕೆಲಸ ಕೊಡಬೇಕು. ಉದ್ಯೋಗ ಸೃಷ್ಟಿಯ ಇತರೆ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ | Nice Road Project : ರೈತರ ಭೂಮಿ ವಾಪಸ್ ಕೊಡದಿದ್ದರೆ ಸಿಂಗೂರು ಮಾದರಿ ಹೋರಾಟ: ಎಚ್‌ಡಿಕೆ ವಾರ್ನಿಂಗ್

ಅಧಿಕಾರಿಗಳಿಗೆ ಸಿಎಂ ನೀಡಿದ ಪ್ರಮುಖ ಸೂಚನೆಗಳು

⦁ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ನೀರು, ಮೇವು ಕೊರತೆ ಆಗಬಾರದು. ಹೀಗಾಗಿ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಗೆ ಮೇವು ಹೋಗದಂತೆ ತಡೆಯಬೇಕು. ರಾಸುಗಳಿಗೆ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಎಲ್ಲಾ ಲಸಿಕೆ ಮತ್ತು ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.

⦁ ಖಾಸಗಿಯಾಗಿ ಸಾಲ ಕೊಟ್ಟವರು ರೈತರಿಗೆ ಬಲವಂತದ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ಬರದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಶೋಷಣೆ ಮಾಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

⦁ ಕೃಷಿ ಇಲಾಖೆ ರೈತರಿಗೆ ಮತ್ತೆ ಮತ್ತೆ ಬೀಗ, ಗೊಬ್ಬರ, ಔಷಧ ಸರಬರಾಜು ಮಾಡಬೇಕು. ಒಮ್ಮೆ ಕೊಟ್ಟ ಬಳಿಕ ಕೈಕಟ್ಟಿ ಕೂರಬಾರದು. ಯಾವುದೇ ಕಾರಣಕ್ಕೆ ಬೆಳೆಹಾನಿ ಸಂಭವಿಸಿದರೆ ಮತ್ತು ಹೊಸದಾಗಿ ರೈತರಿಗೆ ಇವೆಲ್ಲವನ್ನೂ ವಿತರಿಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.

⦁ ಇದುವರೆಗೂ ನಾನು ಹೇಳಿದ ಎಲ್ಲವನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇವುಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಖಚಿತ.

⦁ ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು.

⦁ ಚುನಾವಣೆಗೆ ಮೊದಲು ನಾವು ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿಯಾಗಿದೆ. ಈ ನಾಲ್ಕೂ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜನರಿಗೆ, ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಲೋಪ ಆಗಬಾರದು.

Exit mobile version