ಬೆಂಗಳೂರು: ಮೇಕೆದಾಟು ಯೋಜನೆಗೆ (Mekedatu Project) ತಡೆಯೊಡ್ಡುವ ಮತ್ತೊಂದು ಪ್ರಯತ್ನಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಹೊಸ ಕ್ಯಾತೆಯ ಅರ್ಜಿಯೊಂದಿಗೆ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬೆಂಗಳೂರು ಬಳಕೆಯಾಗುವ ನೀರಿನ ಪ್ರಮಾಣ ಲೆಕ್ಕ ಹಾಕಲು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಕೇಳಿಕೊಂಡಿದೆ. ಇದರೊಂದಿಗೆ ಯೋಜನೆಯನ್ನು ಮತ್ತಷ್ಟು ವಿಳಂಬ ಮಾಡುವುದು ಮಾತ್ರವಲ್ಲದೇ, ಯೋಜನೆಯನ್ನು ಕೈಬಿಡುವಂತೆ ಒತ್ತಡ ಹೇರುವ ತಂತ್ರವನ್ನು ಬಳಸಲು ಮುಂದಾಗಿದೆ.
ತನ್ನ ಪಾಲಿನ ನೀರು ಬಳಸಿಕೊಳ್ಳುವುದಕ್ಕಾಗಿ ಹೊಗೇನಕಲ್‌ಲ್ಲಿ ಕರ್ನಾಟಕವು ಮೇಕೆದಾಟು ಡ್ಯಾಂ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಈ ಯೋಜನೆಗೆ ತಮಿಳುನಾಡು ಸರ್ಕಾರ ಮೊದಲಿನಿಂದಲೂ ತಕಾರರು ತೆಗೆದುಕೊಂಡು ಬಂದಿದೆ. ಈ ಸಂಬಂಧ ಅನೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದೆ. ಈಗ ಹೊಸದಾಗಿ ಮತ್ತೊಂದು ಅರ್ಜಿಯನ್ನು ದಾಖಲಿಸಿದ್ದು, ಬೆಂಗಳೂರು ಬಳಸುತ್ತಿರುವ ನೀರಿನ ಪ್ರಮಾಣ ಲೆಕ್ಕ ಹಾಕಲು ಕೋರಿದೆ.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಕೋರ್ಟೇ ಸುಪ್ರೀಂ, ಪ್ರಾಧಿಕಾರದ ಮಾತು ಕೇಳಲ್ಲ ಎಂದ ಸ್ಟಾಲಿನ್
ಅಸಮಪರ್ಕವಾಗಿ ಕರ್ನಾಟಕವು ಬೆಂಗಳೂರಿಗಾಗಿ ನೀರನ್ನು ಬಳಕೆ ಮಾಡುತ್ತಿದೆ, ಕೃಷಿಗೂ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ತಮಿಳುನಾಡು ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದರೆ, ಕರ್ನಾಟಕವು ಈ ಆರೋಪವನ್ನು ಅಲ್ಲಗಳೆಯುತ್ತಲೇ ಇದೆ. ಮೇಕೆದಾಟು ಡ್ಯಾಂ ಅನ್ನು ಸಂಪೂರ್ಣವಾಗಿ ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಈಗಾಗಲೇ ಕರ್ನಾಟಕ ಸ್ಪಷ್ಟಪಡಿಸಿದೆ. ಕಾವೇರಿ ನದಿ ನೀರನ್ನು ಈಗಾಗಲೇ ಬೆಂಗಳೂರಿಗೆ ಪೂರೈಸಲಾಗುತ್ತಿದೆ. ಮತ್ತೆ ಅದೇ ಉದ್ದೇಶಕ್ಕಾಗಿ ಮೇಕೆದಾಟು ಯೋಜನೆ ಅನಗತ್ಯ ಎಂಬುದನ್ನು ಬಿಂಬಿಸಲು ತಮಿಳು ನಾಡು ಈ ತಂತ್ರ ಹೂಡಿದೆ ಎನ್ನಲಾಗುತ್ತಿದೆ.