Site icon Vistara News

ತಮಿಳುನಾಡಿಗೆ ನೀರು, ಪಂಚ ರಾಜ್ಯಗಳಿಗೆ ಹಣ, ಕರ್ನಾಟಕಕ್ಕೆ ಕತ್ತಲ ಭಾಗ್ಯ ಎಂದ ಕಟೀಲ್

State BJP president Nalin Kumar Kateel

ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚರಾಜ್ಯಗಳಿಗೆ ಹಣದ ಭಾಗ್ಯ, ಕರ್ನಾಟಕದ ಜನತೆಗೆ ಕತ್ತಲ ಭಾಗ್ಯ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥಭವನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿಎಂ, ಡಿಸಿಎಂ ನಡುವಿನ ಅಧಿಕಾರದ ಕಾದಾಟದ ಪರಿಣಾಮವಾಗಿ ಸಿದ್ದರಾಮಯ್ಯರನ್ನು ಮನೆಗೆ ಕಳಿಸಲು ಶಿವಕುಮಾರ್ ಹಾಗೂ ಡಿ.ಕೆ.ಶಿವಕುಮಾರರನ್ನು ಜೈಲಿಗೆ ಕಳುಹಿಸಲು ಸಿದ್ದರಾಮಣ್ಣ ಪ್ರಯತ್ನದಲ್ಲಿದ್ದಾರೆ. ಈ ಕಾದಾಟದಲ್ಲಿ ಕರ್ನಾಟಕ ಬಡವಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಗಾವಣೆಯ ದಂಧೆ ನಡೆಯಿತು. ವರ್ಗಾವಣೆಗೆ ರೇಟ್ ನಿಗದಿ ಮಾಡಿದರು. ವರ್ಗಾವಣೆಯಿಂದ ಆರಂಭವಾದ ಭ್ರಷ್ಟಾಚಾರವು ಬಿಬಿಎಂಪಿ ಗುತ್ತಿಗೆದಾರರ ಹಣ ಬಿಡುಗಡೆಗೆ ಕಮಿಷನ್ ಪಡೆಯುವ ಮೂಲಕ ಮುಂದುವರಿಯಿತು. ಇದು ದಸರಾ ಕಲಾವಿದರಿಂದ ಹಣ ಕೇಳಿದ ಲಜ್ಜೆಗೇಡಿತನದ ಸರ್ಕಾರ ಟೀಕಿಸಿದರು.

ಇದನ್ನೂ ಓದಿ | DK Shivakumar : ನನ್ನನ್ನು ಜೈಲಿಗೆ ಕಳುಹಿಸಲು ಕಟೀಲ್‌, ಕುಮಾರಸ್ವಾಮಿ ಜಡ್ಜಾ?; ಡಿಕೆಶಿ ಕೆಂಡ

ಪಂಚರಾಜ್ಯಗಳಿಗೆ ಹಣದ ಹೊಳೆ ಹರಿಸುತ್ತಿದ್ದಾರೆ. ಗುತ್ತಿಗೆದಾರರ ಬಳಿ ಸಿಕ್ಕಿದ ಹಣದ ಬಗ್ಗೆ ಇಡಿ ತನಿಖೆ ನಡೆಸಬೇಕು. ಸರ್ಕಾರದ ಮಂತ್ರಿಮಂಡಲ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಅವರು, ಕೇವಲ 4 ತಿಂಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆಯಿಂದ ಕರೆಂಟಿಲ್ಲ. ರೈತರಿಗೆ ಪರಿಹಾರ ಕೊಡುತ್ತಿಲ್ಲ. ಸಾಲ ಮಾಡಿದ ರೈತರು ಬರ, ವಿದ್ಯುತ್ ಕೊರತೆಯಿಂದ ಕಷ್ಟದಲ್ಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್‌ ಆಡಳಿತದಿಂದ ಜನ ರೋಸಿಹೋಗಿದ್ದಾರೆ. ಜನರು ಶಾಪ ಹಾಕುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಒಳಗಡೆ ಗುಂಪುಗಾರಿಕೆ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ. ಅಲ್ಲಿಂದ ಕೆಲವರು ಬಸ್ ಹತ್ತಿದ್ದಾರೆ. ಅಲ್ಲಿ ಬಸ್ ಹತ್ತಿದವರನ್ನು ಇಳಿಸಲು ಶಿವಕುಮಾರ್ ಹೋಗಿದ್ದಾರೆ. ಬೇರೆ ಕಡೆ ಇನ್ನೊಂದಿಪ್ಪತ್ತು ಜನ ಬಸ್ ಹತ್ತಲು ರೆಡಿ ಆಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Operation Kamala : ಮತ್ತೆ ಆಪರೇಷನ್‌ ಕಮಲ ಸದ್ದು, ಜೂನ್‌ನಲ್ಲಿ ಉರುಳುತ್ತಾ ಸರ್ಕಾರ? ನನಗೂ ಗೊತ್ತು ಎಂದ ಡಿಕೆಶಿ

ಸರ್ಕಾರದಲ್ಲಿ ಹಣವಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದ ಅವರು, ಸಚಿವರು ಮಜಾ ಮಾಡುತ್ತಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಮುಖ್ಯಮಂತ್ರಿಗಳು ಬರದ ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

Exit mobile version