ಕಲಬುರಗಿ: ಕಲಬುರಗಿಯಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ಭಾಗದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಇನ್ನು ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕೆಂದು ಬಿಜೆಪಿ ಸಹ ಅನೇಕ ಸಭೆ-ಸಮಾರಂಭಗಳನ್ನು ಆಯೋಜನೆ ಮಾಡುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇನ್ನು ಅಫಜಲಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಹಿರಿಯ ರಾಜಕಾರಣಿ ಮಾಲೀಕಯ್ಯ ಗುತ್ತೇದಾರ್ (Malikayya Guttedar) ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿಯೇ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮಗೆ ಈ ಬಾರಿ ಟಿಕೆಟ್ ಸಿಕ್ಕರೆ ಗೆದ್ದು ಮಂತ್ರಿಯಾಗುವುದಾಗಿಯೂ ಹೇಳಿಕೊಂಡಿದ್ದಾರೆ. ಇನ್ನು ಈ ಬಾರಿ ಜಿಲ್ಲೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ಪ್ರಚಾರದಲ್ಲಿ ಭಾಗಿಯಾಗುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ (ಫೆ. ೨೧) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರಲ್ಲಿ 224 ಕ್ಷೇತ್ರಗಳ ಪೈಕಿ 130ರಿಂದ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣವಿದೆ. ಬಿಜೆಪಿ ಪರವಾದ ಅಲೆ ಇದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಳೆದ ಬಾರಿ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿರುವ 9 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ 9ಕ್ಕೆ ೯ ಕ್ಷೇತ್ರವನ್ನೂ ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಇದಕ್ಕಾಗಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಳ್ಳಲು ಮುಂದಾಗಿರುವ ಬಿಜೆಪಿ, ಕೇಂದ್ರದಿಂದ ಘಟಾನುಘಟಿ ನಾಯಕರನ್ನು ಕರೆತರಲಿದೆ. ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಕೇಂದ್ರ ಸಚಿವರು ಇನ್ನು ಸರಣಿ ಕಾರ್ಯಕ್ರಮಗಳ ಮೂಲಕ ಕಲಬುರಗಿಗೆ ಲಗ್ಗೆ ಇಡಲಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hugara Nigama : ಎರಡು ದಿನದಲ್ಲಿ ಐದನೇ ನಿಗಮ ಘೋಷಣೆ, ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸರ್ಕಾರ
ಟಿಕೆಟ್‌ಗಾಗಿ ಸಹೋದರರ ಫೈಟ್
ಇನ್ನು ಕಳೆದ (೨೦೧೮) ಚುನಾವಣೆಯಲ್ಲಿ ಕಾಂಗ್ರೆಸ್ ಅಫಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ವೈ. ಪಾಟೀಲ್ ವಿರುದ್ಧ ೧೦೫೯೪ ಮತಗಳ ಅಂತರದಿಂದ ಸೋಲು ಕಂಡಿರುವ ಮಾಜಿ ಶಾಸಕ ಮಾಲೀಕಯ್ಯ ಗುತ್ತೆದಾರ್ ಈ ಬಾರಿ ಈ ಕ್ಷೇತ್ರದಲ್ಲಿ ಪಕ್ಷದಿಂದ ಟಿಕೆಟ್ ಪಡೆಯಲು ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಕಾರಣ, ಅವರ ಸಹೋದ ನಿತಿನ್ ಗುತ್ತೇದಾರ್ ಅಡ್ಡಗಾಲಾಗಿದ್ದು, ಅವರೂ ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ, ಶತಾಯಗತಾಯ ಟಿಕೆಟ್ ಪಡೆಯಲೇಬೇಕೆಂದು ಪಣ ತೊಟ್ಟಿರುವ ಮಾಲೀಕಯ್ಯ ಗುತ್ತೇದಾರ್ ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ಎಂದಾಗ ಸ್ಪರ್ಧೆ ಮಾಡಬೇಕು, ಗೆಲ್ಲಬೇಕು ಮತ್ತು ಶಾಸಕನಾಗಬೇಕು ಎಂಬ ಆಸೆ ಎಲ್ಲರಿಗೂ ಇರುವುದು ಸಹಜ. ಹಾಗೆಯೇ ನನ್ನ ತಮ್ಮ ನಿತಿನ್ ಗುತ್ತೇದಾರ್‌ಗೂ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.
ಮುಂದುವರಿದು ಮಾತನಾಡಿದ ಮಾಲೀಕಯ್ಯ, ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿ ಗೆದ್ದರೆ ಸಚಿವನಾಗುತ್ತೇನೆ ಎಂಬ ನಿರೀಕ್ಷೆ ಜನರಲ್ಲಿ ಇದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗೂ ಸಹಾಯಕವಾಗುತ್ತದೆ. ಆದರೆ, ನನ್ನ ತಮ್ಮ ನಿತಿನ್ ಗುತ್ತೇದಾರ್‌ಗೆ ಕೆಲವರು ಸುಮ್ಮನೆ ಪ್ರೋತ್ಸಾಹ ನೀಡಿ, ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ನಮ್ಮ ಬಿಜೆಪಿ ಹೈಕಮಾಂಡ್ ನನ್ನ ತಮ್ಮನಿಗೆ ಟಿಕೆಟ್ ನೀಡಿದರೆ, ಅವನನ್ನೇ ಗೆಲ್ಲಿಸೋಣ. ನನಗೆ ಟಿಕೆಟ್ ಕೊಟ್ಟರೆ ನನಗೆ ಬೆಂಬಲ ನೀಡುತ್ತಾನೆ. ಅಷ್ಟಕ್ಕೂ ಇದು ನಮ್ಮ ಮನೆ ವಿಚಾರವಾಗಿದೆ. ಇದನ್ನು ನಾವು ಬಗೆಹರಿಸಿ ಕೊಳ್ಳುತ್ತೇವೆ. ಬೇರೆಯವರು ತಲೆಕೆಡಿಸಿಕೊಳ್ಳುವುದು ಬೇಡ ಎಂದು ನಗುತ್ತಲೇ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಲೀಕಯ್ಯ ಗುತ್ತೇದಾರ್ ಗೆದ್ದರೆ ಮಂತ್ರಿ ಆಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೆಲವು ಜನರು ನಾನು ಮಂತ್ರಿಯಾಗಬಾರದು ಎಂದು ನೋಡುತ್ತಿದ್ದಾರೆ. ಇದಕ್ಕೆ ನಮ್ಮ ಪಕ್ಷದವರೇ ಕೆಲವರು ಕುತಂತ್ರ ನಡೆಸಿದ್ದಾರೆ. ಇದಕ್ಕಾಗಿ ನನ್ನ ತಮ್ಮನನ್ನು ಪುಸಲಾಯಿಸಲಾಗುತ್ತಿದೆ. ಇದು ನಮ್ಮ ವರಿಷ್ಠರಿಗೂ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Assembly Session: ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಯಿಂದ ಅಂಗನವಾಡಿಗೆ ಆಹಾರ ಪೂರೈಕೆ: ಟಿ.ಎ. ಶರವಣ ಆರೋಪದಿಂದ ಸದನದಲ್ಲಿ ಜಟಾಪಟಿ
ಸತತ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಲು ನಾನು ಸಾಕಷ್ಟು ಶ್ರಮವಹಿಸಿದ್ದೇನೆ. ಈ ಕಾರಣದಿಂದಲೇ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲು ಕಾಣಬೇಕಾಯಿತು. ಈ ವಿಷಯವೂ ನಮ್ಮ ನಾಯಕರಿಗೆ ಗೊತ್ತಿದೆ ಎಂದು ಮಾಲೀಕಯ್ಯ ಹೇಳಿದರು.