Site icon Vistara News

Tarikere Election Results: ತರೀಕೆರೆಯಲ್ಲಿ ಶ್ರೀನಿವಾಸ್‌ ಎದುರು ಸೋತ ಸುರೇಶ್‌; ಮತ ಕಸಿದ ಪಕ್ಷೇತರ

Tarikere Election results GS Shrinivas

ತರೀಕೆರೆ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು, ತರೀಕೆರೆ ವಿಧಾನಸಭಾ ಕ್ಷೇತ್ರದಿಂದ (Tarikere Election Results) ಕಾಂಗ್ರೆಸ್‌ ಪಕ್ಷದ ಜಿ.ಎಸ್‌. ಶ್ರೀನಿವಾಸ್‌ ಅವರು ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸಿಡಿದು ಪಕ್ಷೇತರವಾಗಿ ಗೋಪಿಕೃಷ್ಣ ನಿಂತಿದ್ದರೂ ಕೈ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ, ಬಿಜೆಪಿ ನಾಲ್ಕು ಸಾವಿರ ಮತಗಳ ಅಂತರದಿಂದ ಸೋಲುಂಡಿದೆ.

ಬಂಡಾಯದ ಮಧ್ಯೆಯೂ ಗೆದ್ದ ಕಾಂಗ್ರೆಸ್‌

ಈ ಬಾರಿಯ ಚುನಾವಣೆಯಲ್ಲಿ ತರೀಕೆರೆಯಿಂದ ಕಾಂಗ್ರೆಸ್‌ನಲ್ಲಿ ಬರೋಬ್ಬರಿ 12ಕ್ಕೂ ಹೆಚ್ಚು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರು. ಆದರೂ ಕಾಂಗ್ರೆಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಜಿ.ಎಸ್. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿತ್ತು.‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಟಿಕೆಟ್‌ ಸಿಗದೇ ಇದ್ದುದ್ದರಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ತೊಡೆತಟ್ಟಿದ್ದರು. ಇವರಲ್ಲದೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ದೋರನಾಳು ಪರಮೇಶ್‌ ಕೂಡ ಕಣದಲ್ಲಿದ್ದರು. ಆದರೆ, ಈ ಎಲ್ಲ ಸವಾಲುಗಳನ್ನೂ ಮೆಟ್ಟಿ ಶ್ರೀನಿವಾಸ್ ಜಯಭೇರಿ ಬಾರಿಸಿದ್ದಾರೆ. 63083 ಮತಗಳನ್ನು ಪಡೆದುಕೊಂಡಿದ್ದು, ಸಮೀಪ ಸ್ಪರ್ಧಿ ಬಿಜೆಪಿಯ ಡಿ.ಎಸ್. ಸುರೇಶ್ ಅವರನ್ನು 4028 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸೋಲುಂಡ ಸುರೇಶ್‌

ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಎಸ್. ಸುರೇಶ್ ಅವರು 11,707 ಮತಗಳ ಅಂತರದಿಂದ ಗೆದ್ದಿದ್ದರು. ಪಕ್ಷ ಈ ಬಾರಿಯೂ ಅವರಿಗೇ ಟಿಕೆಟ್‌ ನೀಡಿತ್ತು. ಅಲ್ಲದೆ, ಅಭಿವೃದ್ಧಿಯ ಮಂತ್ರ ಹಾಗೂ ಡಬಲ್‌ ಎಂಜಿನ್‌ ಸರ್ಕಾರದ ಪ್ಲೇಕಾರ್ಡ್‌ ಹಿಡಿದು ಮತದಾರರ ಮುಂದೆ ಹೋಗಿದ್ದರು. ಆದರೆ, ಅವರ ಅಂತಿಮವಾಗಿ ಸೋಲುಂಡಿದ್ದಾರೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿದ್ದಾರೆಯಾದರೂ ಪೈಪೋಟಿ ನೀಡಿಲ್ಲ.

ಅಬ್ಬರಿಸಿದ ಪಕ್ಷೇತರ

ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಸಹ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಇವರು ಅಲ್ಲಿ ಟಿಕೆಟ್‌ ಸಿಗದೇ ಇದ್ದಿದ್ದಕ್ಕೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೂ ಅಪಾರ ಸಂಖ್ಯೆಯಲ್ಲಿ ಮತ ಪಡೆದುಕೊಂಡಿದ್ದಾರೆ. ಒಟ್ಟು 35468 ಮತಗಳನ್ನು ಪಡೆಯುವ ಮೂಲಕ ತಾವು ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಳೆದ ಚುನಾವಣೆಯ ಫಲಿತಾಂಶ ಏನು?
ಡಿ ಎಸ್ ಸುರೇಶ್ (ಬಿಜೆಪಿ): 44, 960- ಶ್ರೀನಿವಾಸ್ ಜಿ ಎಚ್‌ (ಪಕ್ಷೇತರ) :33, 253- ಗೋಪಿ ಕೃಷ್ಣ (ಪಕ್ಷೇತರ): 29, 663- ಎಸ್ ಎಂ ನಾಗರಾಜು (ಕಾಂಗ್ರೆಸ್):20, 406 -ಗೆಲುವಿನ ಅಂತರ: 11,707

ಈ ಚುನಾವಣೆಯ ಫಲಿತಾಂಶ ಇಂತಿದೆ
ಜಿ. ಶ್ರೀನಿವಾಸ್ ಕಾಂಗ್ರೆಸ್ (ಕಾಂಗ್ರೆಸ್‌): 63083 | ಡಿ.ಎಸ್. ಸುರೇಶ್ (ಬಿಜೆಪಿ): 59055 | ಗೋಪಿಕೃಷ್ಣ (ಪಕ್ಷೇತರ): 35468, ಗೆಲುವಿನ ಅಂತರ: 4028

ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್‌ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್‌

ತರೀಕೆರೆ ಕ್ಷೇತ್ರ ಚಿತ್ರಣ

ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷ, ಜನತಾ ಪಕ್ಷ, ಪ್ರಜಾ ಸಮಾಜವಾದಿ ಪಕ್ಷ ಹೀಗೆ ಇತರ ಪಕ್ಷಗಳ ಅಭ್ಯರ್ಥಿಗಳನ್ನೂ ಗೆಲ್ಲಿಸಿದ ಇತಿಹಾಸವನ್ನು ತರೀಕೆರೆ ವಿಧಾನಸಭಾ ಕ್ಷೇತ್ರ ಹೊಂದಿದೆ. ಈ ಬಾರಿಯೂ ಇಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಒಮ್ಮೆ ಗೆದ್ದವರು ಮತ್ತೆ ಇಲ್ಲಿ ಗೆದ್ದಿರಲಿಲ್ಲ. ಈ ಬಾರಿಯೂ ಇದು ಮುಂದುವರಿದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಕಂಡಿದ್ದಾರೆ.

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version