Site icon Vistara News

Tata Technologies : ರಾಜ್ಯದಲ್ಲಿ ಟಾಟಾ ಟೆಕ್ನಾಲಜೀಸ್‌ನಿಂದ 2,000 ಕೋಟಿ ರೂ. ಹೂಡಿಕೆ

TaTa Technologies

ಬೆಂಗಳೂರು: ರಾಜ್ಯದಲ್ಲಿ ರೂ. 2000 ಕೋಟಿ ಹೂಡಿಕೆಗೆ ಟಾಟಾ ಟೆಕ್ನಾಲಜೀಸ್ ಪ್ರಸ್ತಾಪಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಅವರು ತಿಳಿಸಿದ್ದಾರೆ. ಟಾಟಾ ಟೆಕ್ನಾಲಜೀಸ್ ಕಂಪನಿಯು ( Tata Technologies) ಕರ್ನಾಟಕದಲ್ಲಿ ಮೂರು ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರಗಳನ್ನು (ಸಿ ಇ ಎಫ್ ಸಿ- ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್) ಸ್ಥಾಪಿಸಲು ಮುಂದೆ ಬಂದಿದೆ.

ಕಂಪನಿಯ ಉನ್ನತ ಅಧಿಕಾರಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಬುಧವಾರ ಭೇಟಿಯಾಗಿ ಈ ಸಂಬಂಧ ಪ್ರಸ್ತಾವ ಸಲ್ಲಿಸಿ ಮಾತುಕತೆ ನಡೆಸಿದರು. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು (ಎಂಎಸ್ಎಂಇ) ಗಳನ್ನು ಗಮನದಲ್ಲಿರಿಸಿಕೊಂಡು ಈ ಘಟಕಗಳನ್ನು ಸ್ಥಾಪಿಸುವುದು ಕಂಪನಿಯ ಉದ್ದೇಶವಾಗಿದೆ. ಸರ್ಕಾರ‌ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಇದನ್ನು ಸ್ಥಾಪಿಸುವ ಯೋಜನೆ ಇದಾಗಿದೆ. ಟಾಟಾ ಟೆಕ್ನಾಲಜೀಸ್ ಶೇಕಡ 70ರಷ್ಟು ಹೂಡಿಕೆ ಮಾಡಿದರೆ ಸರ್ಕಾರದ ಪಾಲು ಶೇಕಡ 30ರಷ್ಟು ಇರಲಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಎಂಎಸ್ಎಂಇಗಳಿಗಾಗಿ ಸಿ.ಇ.ಎಫ್.ಸಿ. ಸ್ಥಾಪನೆ ಸಂಬಂಧ ಪ್ರಸ್ತಾವ ಸಲ್ಲಿಕೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ಪ್ರತಿ ಒಂದು ಕೇಂದ್ರಕ್ಕೆ ಸುಮಾರು 630 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇವುಗಳಿಂದ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿರುವ ಅಡ್ವಾನ್ಸ್ ಮ್ಯಾನಫ್ಯಾಕ್ಚರಿಂಗ್ 4.0, ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಚ್ಚಿನ ಉಪಯೋಗ ಆಗುತ್ತದೆ. ಅದೇ ರೀತಿ ಈ ವಲಯಗಳ ಸ್ಟಾರ್ಟಪ್‌ಗಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಈ ಪ್ರಸ್ತಾವ‌ ಸ್ವಾಗತಾರ್ಹ. ಸರ್ಕಾರವೂ ಎಂ.ಎಸ್.ಎಂ.ಇ.ಗಳನ್ನು ಬಲಪಡಿಸಲು ಒತ್ತು ಕೊಟ್ಟಿದೆ. ಪ್ರತಿ ಕೇಂದ್ರಕ್ಕೆ ಸುಮಾರು ಐದು ಎಕರೆಯಷ್ಟು ಜಾಗ ಬೇಕಾಗಲಿದ್ದು, ಇದನ್ನು ಎಲ್ಲಿ ಕೊಡಬೇಕೆಂಬ ಬಗ್ಗೆ ಬರುವ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು. (TATA Group) ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಪವನ್ ಭಗೇರಿಯಾ, ಉಪಾಧ್ಯಕ್ಷ ಪುಷ್ಕರಾಜ್ ಕೌಲಗೂಡ್, ಮುಖ್ಯಸ್ಥ ಪ್ರವೀಣ್ ದಿವೇಕರ್ ಅವರು ಇದ್ದರು. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಅವರೂ ಇದ್ದರು.

ಟಿಸಿಎಸ್‌ಗೆ 11,074 ಕೋಟಿ ರೂ. ತ್ರೈಮಾಸಿಕ ಲಾಭ: ಟೆಕ್ನಾಲಜಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (Tata Consultancy Services) ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 11,074 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದಾಯ 59,381 ಕೋಟಿ ರೂ.ಗೆ ಏರಿದೆ. ಪ್ರತಿ ಷೇರಿಗೆ 9 ರೂ. ಡಿವಿಡೆಂಡ್‌ ಅನ್ನು ಕಂಪನಿ ಘೋಷಿಸಿದೆ.

Exit mobile version