Site icon Vistara News

ತತ್ತ್ವ ಶಂಕರ: ಭವತಿ ಭಿಕ್ಷಾಂ ದೇಹಿ ಎಂದು ಹೊರಟ ಶಂಕರ ಮಾಡಿದ್ದೇನು?

Tattva Shankara: What did Shankara do when he went out as Bhavati Bhiksham Dehi?

| ತಪಸ್ವಿ
ಐದನೇ ವಯಸ್ಸಿನಲ್ಲಿ ಉಪನಯನ ಸಂಸ್ಕಾರವನ್ನು ಮಾಡಿಸಿಕೊಂಡ ಶಂಕರನು (Tattva Shankara) ಗುರುಕುಲಕ್ಕೆ ಹೊರಟನು. ಗುರುಕುಲದಲ್ಲಿ ಶಂಕರನು ಇತರ ವಿದ್ಯಾರ್ಥಿಗಳಂತೆ ಅಲ್ಲ. ಅವನು ತೀಕ್ಷ್ಣ ಬುದ್ಧಿಯುಳ್ಳನಾಗಿದ್ದ. ಅವನ ಪ್ರೌಢಿಮೆ ನೋಡಿ ಗುರುಗಳೇ ಬೆರಗಾಗುತ್ತಿದ್ದರು. ಶಂಕರನು ಸದ್ಗುಣಗಳ ನಿಧಿಯಾಗಿದ್ದ. ಅವನು ಎಲ್ಲರ ಮನಸನ್ನು ಸೂರೆಗೊಳಿಸಿದ್ದ. ಹೀಗಿರಲು ಅಂದು ಈಗಿನಂತೆ ಅಡುಗೆ ಮಾಡುವುದಕ್ಕಾಗಿ ಯಾರೂ ಇರುತ್ತಿರಲಿಲ್ಲ. ವಿದ್ಯಾರ್ಥಿಗಳು ಭಿಕ್ಷೆ ಬೇಡಿ ತಂದು ಗುರುಗಳಿಗೆ ಒಪ್ಪಿಸಿ ಅವರು ಕೊಟ್ಟಿದ್ದನ್ನು ಸೇವಿಸಬೇಕು ಎಂಬ ನಿಯಮವಿತ್ತು. ಭಿಕ್ಷೆ ಬೇಡುವುದು ಯಾಕೆ ಎಂದರೆ ಹೊಟ್ಟೆ ಪಾಡು ಎಂಬ ಯೋಚನೆ ಬರಬಾರದು. ಕಲಿಯುವ ವಯಸ್ಸಿನಲ್ಲಿ ಜ್ಞಾನವೊಂದೇ ಗುರಿಯಾಗಿರಬೇಕು. ಅಡುಗೆಯವರು ಇದ್ದರೆ ದಿನವೂ ಮೃಷ್ಟಾನ್ನ ಭೋಜನ ಸಿಗುತ್ತದೆ. ಅಥವಾ ಹಸಿವಾದರೆ ಏನೋ ತಿನ್ನಲಿಕ್ಕೆ ಸಿಗುತ್ತದೆ. ಆಗ ವಿದ್ಯಾರ್ಥಿಗಳ ಮನಸ್ಸು ಕಲಿಕೆಯಿಂದ ವಿಮುಖವಾಗುತ್ತದೆ ಎಂದು ಹಿಂದೆ ಗುರುಕುಲಗಳಲ್ಲಿ ಆ ನಿಯಮವಿತ್ತು. ಅವರಿಗೆ ಸಿಕ್ಕಷ್ಟೇ ಆಹಾರದಲ್ಲಿ ಬದುಕುವ ರೀತಿ, ತಿನ್ನುವುದರ ಮೇಲೆ ನಿರ್ಬಯಕೆ, ಇದು ಗುರುಕುಲಗಳಲ್ಲಿನ ಬೋಧನೆಯಾಗಿತ್ತು.

ಇದನ್ನೂ ಓದಿ | ತತ್ತ್ವ ಶಂಕರ : ಭಾರತದ ಮಣ್ಣನ್ನು ಪಾವನಗೊಳಿಸಿದ ಶಂಕರರು

ಭಿಕ್ಷೆ ಬೇಡಲು ಹೊರಟ ಶಂಕರ

ಹೀಗೆ ಭಿಕ್ಷೆಯನ್ನು ಬೇಡಲು ಶಂಕರನು ಹೊರಟ. “ಭವತಿ ಭಿಕ್ಷಾಂ ದೇಹಿ” ಎನ್ನುತ್ತಾ ಹೊರಟನು. ಒಂದು ಮನೆಯ ಮುಂದೆ ಬಂದು ಭವತಿ ಭಿಕ್ಷಾಂ ದೇಹಿ ಎಂದನು. ಮನೆಯಿಂದ ಏನೂ ಉತ್ತರ ಬರಲಿಲ್ಲ. ಮತ್ತೊಮ್ಮೆ ಶಂಕರನು “ಭವತಿ ಭಿಕ್ಷಾಂ ದೇಹಿ” ಎಂದು ಕರೆದನು. ಕಿಟಕಿಯಿಂದ ಒಬ್ಬಳು ಇಣುಕಿ ನೋಡಿದಳು. ಹೊರಗೆ ಬರಲು ಆಗದಷ್ಟು ಅವಳು ಅಶಕ್ತಳಾಗಿದ್ದಳು. ಅವಳು ಹೊರಗೆ ಬಂದಳು. ಅವಳನ್ನು ಕಂಡು ಶಂಕರನು “ ಭಿಕ್ಷೆ ನೀಡು ತಾಯಿʼʼ ಎಂದನು. ಅದಕ್ಕೆ ಅವಳು “ಪುಟ್ಟಾ ನಿನ್ನಂಥ ವಟುವಿಗೆ ಭಿಕ್ಷೆ ನೀಡುವ ಭಾಗ್ಯ ನನಗಿಲ್ಲʼʼ ಎಂದು ಕಣ್ಣೀರು ಸುರಿಸಿದಳು. ಶಂಕರನು “ಯಾಕೆ ತಾಯಿʼʼ ಎಂದು ಕುತೂಹಲದಿಂದ ಕೇಳಿದ. ಅದಕ್ಕೆ ಅವಳು “ಈ ಮುರುಕು ಮನೆಯನ್ನು ನೋಡು ಈಗಲೋ ಆಗಲೋ ಎನ್ನುವಂತಿದೆ. ನಾನಂತೂ ಊಟ ಮಾಡಿ ಮೂರು ದಿನಗಳಾಗಿವೆ. ಯಜಮಾನರು ಭಿಕ್ಷೆಗೆಂದು ಪಕ್ಕದ ಊರಿಗೆ ಹೋದವರು ಇನ್ನೂ ಬಂದಿಲ್ಲ. ಇಂತಹ ಪರಿಸ್ಥಿಯಲ್ಲಿ ನಾನು ನಿನಗೆ ಏನು ಭಿಕ್ಷೆ ನೀಡಲಿ ಮಗುʼʼ ಎಂದು ಕಣ್ಣೀರು ಸುರಿಸಿದಳು.

ಇದನ್ನೂ ಓದಿ | ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

ಆಕೆ ಕಣ್ಣೀರು ಸುರಿಸಿದಳು

ಶಂಕರನು ಒಂದು ಕ್ಷಣ ಯೋಚಿಸಿದ. ಅವತಾರ ಪುರುಷರೆಂದರೆ ಹಾಗೆ. ಅವರಿಗೆ ನಿಜವಾದ ಸಜ್ಜನರು ಎಲ್ಲಿರುವರು ಎಂದು ತಿಳಿದಿರುತ್ತದೆ. ಆ ಸಜ್ಜನರಿಗೆ ಏನಾದರೂ ತೊಂದರೆ ಆದರೆ ಏನೋ ಒಂದು ಕಾರ್ಯವನ್ನು ನಿಮಿತ್ತ ಮಾಡಿಕೊಂಡು ಅವರಿಗೆ ಪೂರ್ಣ ಕೃಪೆದೋರುತ್ತಾರೆ. ತಮ್ಮನ್ನೂ ಮರೆತು ಅವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಹೀಗಿರುವಾಗ ಶಂಕರನು, ಹಾಗಾದರೆ ನಾನಿನ್ನೂ ಹೊರಡುವೆ ಎಂದು ಹೊರಡಲು ಸಿದ್ಧನಾಗುತ್ತಾನೆ. ಆಗ ಅವಳು ನಿಲ್ಲು ಪುಟ್ಟಾ ಎನ್ನುತ್ತಾ ದಡಕ್ಕನೆ ಒಳಕ್ಕೆ ಓಡಿದಳು. ನಂತರ ಹೊರಕ್ಕೆ ಬಂದು ಪುಟ್ಟಾ ನಿನ್ನ ಭಿಕ್ಷಾ ಪಾತ್ರೆಯನ್ನು ಹಿಡಿ. ಹಿತ್ತಲಲ್ಲಿ ಬಿಟ್ಟಿದ್ದ ಒಂದೇ ಒಂದು ನೆಲ್ಲಿಕಾಯಿಯನ್ನು ನಿನಗೆ ಭಿಕ್ಷೆ ಹಾಕುತ್ತೇನೆಂದು ತಂದು ಹಾಕಿದಳು. ಆಗ ಬಾಲ ಶಂಕರನ ಹೃದಯವು ಕರಗಿ ನೀರಾಯಿತು. ಅವನು ಇವಳಿಗೆ ಏನಾದರೂ ದಾರಿ ಮಾಡಬೇಕೆಂದು ಅಲ್ಲಿಯೇ ಲಕ್ಷ್ಮೀ ದೇವಿಯ ಸ್ತುತಿ ಮಾಡಿದನು. ಅದಕ್ಕೆ ದೇವಿಯು ಪ್ರತ್ಯಕ್ಷಳಾದಳು. ಆಗ ಶಂಕರನು ದೇವಿಗೆ ನಮಿಸಿ ಅವಳಿಗೆ ಸಿರಿಯನ್ನು ಅನುಗ್ರಹಿಸಲು ದೇವಿಯನ್ನು ಕೇಳಿದನು. ಅದಕ್ಕೆ ದೇವಿಯು “ಶಂಕರಾ ಇವಳು ಹಿಂದಿನ ಜನ್ಮದಲ್ಲಿ ಯಾವುದೇ ದಾನವನ್ನು ಮಾಡಿಲ್ಲ. ಹಾಗಾಗಿ ಇವಳಿಗೆ ಸಿರಿಯು ಸಿಗುವುದಿಲ್ಲ” ಎಂದಳು. ಆಗ ಶಂಕರನು “ಈಕೆ ಇಂತಹ ಕಷ್ಟದಲ್ಲೂ ಒಂದು ನೆಲ್ಲಿಕಾಯಿಯನ್ನು ನನಗೆ ಭಿಕ್ಷೆ ನೀಡಿದ್ದಾಳೆ. ಆದ್ದರಿಂದ ನೀನು ಅವಳಿಗೆ ಕೃಪೆ ತೋರು ಎಂದನು. ಹೀಗೆಯೇ, ದೇವರು ಭುವಿಗೆ ಇಳಿದು ಬಂದಾಗ ದೀನರ ಮೇಲೆ ತೋರುವ ದೃಷ್ಟಿಯೇ ದಯೆ. ಆ ದೃಷ್ಟಿಯು ಮಾನವನ ಪೂರ್ಣ ಏಳಿಗೆಯನ್ನು ನೀಡುವ ಕರುಣಾ ಸಾಗರ. ಈ ರೀತಿ ಶಂಕರನ ಕೋರಿಕೆಗೆ ದೇವಿಯು ಕನಕದ ಧಾರೆಯನ್ನೆ ಸುರಿಸಿದಳು. ಆ ಪ್ರಸಿದ್ಧ ಸ್ತೋತ್ರವೇ ಕನಕ ಧಾರಾ ಸ್ತೋತ್ರ. ಮುಂದೆ ಆ ಮಹಿಳೆಯು ಸಿರಿವಂತಳಾದಳು. ಇಂದಿಗೂ ಕಾಲಟಿಯ ಪುಣ್ಯ ಭೂಮಿಯಲ್ಲಿ ಈ ಸ್ವರ್ಣ ಗೃಹವನ್ನು ನಾವು ಕಂಡು ಬಾಲ ಶಂಕರನ ಅವತಾರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Exit mobile version