Site icon Vistara News

BY Vijayendra: ರೈತ, ರಾಮ, ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿ: ವಿಜಯೇಂದ್ರ ಕರೆ

BY Vijayendra

ಬೆಂಗಳೂರು: ಹಲವಾರು ದಶಕಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಾಗಿ ನಿರಂತರ ಹೋರಾಟ ನಡೆಯುತ್ತಿತ್ತು. ಇನ್ನೊಂದೆಡೆ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿಗಾಗಿ ಒತ್ತಾಯ ನಡೆದಿತ್ತು. ಆ ಎರಡೂ ಆಶಯಗಳು ಇದೀಗ ಈಡೇರುತ್ತಿವೆ. ಇದೊಂದು ಶುಭ ಸಂದರ್ಭ ಎಂದು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ತಿಳಿಸಿದರು.

ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದೀಜಿ ಅವರು ದೇಶದ ಪ್ರಧಾನಮಂತ್ರಿಯಾಗಿ ಸುಮಾರು ಒಂಬತ್ತೂವರೆ ವರ್ಷ ಕಳೆದಿದೆ. ಒಂದು ದಿನವೂ ರಜೆ ತೆಗೆದುಕೊಳ್ಳದೆ ತಪಸ್ಸಿನ ರೀತಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿಜೀ ಎಂದು ತಿಳಿಸಿದರು.

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಲು ಮೋದೀಜಿ ಸಂಕಲ್ಪ ಮಾಡಿದ್ದಾರೆ ಎಂದ ಅವರು, ಬಿಜೆಪಿ ಕಾರ್ಯಕರ್ತರಾದ ನಾವು ಪುಣ್ಯವಂತರು. ಈ ಹಿಂದೆ ಅಭಿವೃದ್ಧಿ ಅನುದಾನ 85 ರೂಪಾಯಿ ಪೋಲಾಗಿ 15 ರೂಪಾಯಿ ಮಾತ್ರ ತಲುಪುತ್ತಿದ್ದುದನ್ನು ಪ್ರಧಾನಿ ರಾಜೀವ್ ಗಾಂಧಿ ಅವರು ಸ್ವತಃ ತಿಳಿಸಿದ್ದರು. ಇವತ್ತು ಡಿಬಿಟಿ ಮೂಲಕ ನೇರವಾಗಿ ಸೌಲಭ್ಯಗಳು ತಲುಪುತ್ತಿವೆ. ಇದಕ್ಕೆ ನರೇಂದ್ರ ಮೋದಿಯವರ ಇಚ್ಛಾಶಕ್ತಿ ಕಾರಣ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ | Ram Janmabhoomi: ರಾಮ ಭಕ್ತರ ಟಾರ್ಗೆಟ್‌; ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಬಿಜೆಪಿ ವಿರುದ್ಧ ಆರೋಪಗಳು, ಗ್ಯಾರಂಟಿ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಿತು. ಇದು ಶೇ. 80 ಭ್ರಷ್ಟಾಚಾರದ ಸರ್ಕಾರ. ಇದು ಅಲ್ಪಸಂಖ್ಯಾತರ ತುಷ್ಟೀಕರಣದ ಸರ್ಕಾರ. ಬರಗಾಲದ ಸಂದರ್ಭದಲ್ಲಿ 550ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒಂದು ಪೈಸೆ ನೀಡದ ಸರ್ಕಾರವು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ತಿಳಿಸುತ್ತದೆ. ಇದು ಹಿಂದು ವಿರೋಧಿ, ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಹಿಂದುಗಳನ್ನು ಬೆದರಿಸಲು ಮುಂದಾದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದ ಅವರು, ಕಾಂಗ್ರೆಸ್ ಪಕ್ಷದ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ. ಹುಬ್ಬಳ್ಳಿಯ ಬಂಧಿತ ಶ್ರೀಕಾಂತ್ ಅವರ ಬಿಡುಗಡೆಗೆ ಆಗ್ರಹಿಸಿ ನಾಳೆ (ಡಿ.3) ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಕಾರ್ಯಕರ್ತರೆಲ್ಲರೂ ನಾಳೆ ಹೋರಾಟದಲ್ಲಿ ಭಾಗವಹಿಸಿ, ರಾಮವಿರೋಧಿ, ಹಿಂದು ವಿರೋಧಿ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಬಗ್ಗೆ ಜನರಿಗೆ ಭರವಸೆ ಇಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದೀಜಿ ಗ್ಯಾರಂಟಿ ಕುರಿತು ಜನರು ಒಲವು ತೋರಿದ್ದಾರೆ. 28ಕ್ಕೆ 28 ಕ್ಷೇತ್ರ ಗೆದ್ದು ನಾವು ಕಾಂಗ್ರೆಸ್‍ಗೆ ಉತ್ತರ ಕೊಡೋಣ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಉತ್ತಮ ಗೆಲುವು ನಮ್ಮದಾಗಬೇಕಿದೆ ಎಂದು ತಿಳಿಸಿದರು.

ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ- ಆರ್.ಆಶೋಕ್

ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಬಿಜೆಪಿ ಮುಂದೆ ಸಿದ್ದರಾಮಯ್ಯನವರ ಸರ್ಕಾರವು ಭೂತದಂತೆ ನಿಂತಿದೆ. ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ಕೇಸನ್ನು ಇದೀಗ ತೆರೆದು ನೋಟಿಸ್ ಕೊಡದೆ ಬಂಧಿಸುವ ಕಾರ್ಯ ನಡೆದಿದೆ. ಕಾಂಗ್ರೆಸ್ ಮತ ರಾಜಕೀಯಕ್ಕಾಗಿ ಹಿಂದು- ಮುಸಲ್ಮಾನರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಶ್ರೀರಾಮ ಈ ದೇಶದ ಆದರ್ಶ ಪುರುಷ. ರಾಮ ಮಂದಿರಕ್ಕಾಗಿ 500- 600 ವರ್ಷಗಳಿಂದ ನಡೆದಿದೆ. ದಾಳಿಕೋರರು ರಾಮಮಂದಿರ ಧ್ವಂಸ ಮಾಡಿದ್ದರು. ವಿಜಯನಗರ ಹಂಪಿ ದೇವಾಲಯ, ಸೋಮನಾಥ ದೇವಾಲಯಗಳ ಮೇಲೆ ದಾಳಿ ನಡೆದಿತ್ತು. ರಾಮಮಂದಿರ ಸಂಬಂಧ ಜಾಗೃತಿಯಿಂದ ಕಾಂಗ್ರೆಸ್‍ನವರಿಗೆ ಭಯ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ರಾಮಭಕ್ತರಿಗೆ ಭಯ ಮೂಡಿಸಲು ಈ ಕುತಂತ್ರ ಎಂದು ಟೀಕಿಸಿದರು.

ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ ಎಂದ ಅವರು, ಅಕ್ಷತೆ ಕೊಡುವುದಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದು ಟಿಪ್ಪು ಸರ್ಕಾರವೇ ಎಂದು ಪ್ರಶ್ನಿಸಿದರು. ರಾವಣನೂ ಅಧಿಕಾರ ಕಳಕೊಂಡ. ನೀವು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಮರಾಜ್ಯವೂ ಮುಂದೆ ಮೋದೀಜಿ ಅವರ ನೇತೃತ್ವದಲ್ಲಿ ನಡೆಯಲಿದೆ. ನಾಳೆ ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ನೋಟಿಸ್ ಕೊಡದೆ ಬಂಧಿಸಿದ್ದೇಕೆ? 30 ವರ್ಷ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಬಂಧಿಸಿಲ್ಲವೇಕೆ? ಕಾಂಗ್ರೆಸ್ ಸರ್ಕಾರ ತುಘಲಕ್ ಸರ್ಕಾರದಂತೆ ವರ್ತಿಸುತ್ತಿದೆ. ರೈತರ ಆತ್ಮಹತ್ಯೆ, ರೈತರಿಗೆ ಬರ ಪರಿಹಾರ ಕೊಡದ ಸರ್ಕಾರ ಮುಸಲ್ಮಾನರಿಗೆ 11 ಸಾವಿರ ಕೋಟಿ ನೀಡಲು ಮುಂದಾಗಿ. ಸಿದ್ದರಾಮಯ್ಯರದು ಒಡೆದಾಳುವ ನೀತಿ. ಸಿದ್ದರಾಮಯ್ಯರು ಒಡೆದು ಆಳುವ ಬ್ರ್ಯಾಂಡ್ ಅಂಬಾಸಿಡರ್ ಎಂದರು.

ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಗೆಲ್ಲುವಂಥ ಪರಿಸ್ಥಿತಿ ಇದೆ. ಕಾರ್ಯಕರ್ತರು, ಮುಖಂಡರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ. ಕಾಂಗ್ರೆಸ್‍ನವರಿಗೆ ಸೋನಿಯಾ ಗಾಂಧಿ ಮೊದಲು; ನಮಗೆ ಪಕ್ಷ ಮೊದಲು ಎಂದು ತಿಳಿಸಿದರು.

ಇದನ್ನೂ ಓದಿ | CM Siddaramaiah: ಸಿದ್ದರಾಮಯ್ಯ ಎಂದಾದರೂ ರಾಮನಿಗೆ ಸಮನಾಗಲು ಸಾಧ್ಯವೇ?; ಬಿಜೆಪಿ ವಾಗ್ದಾಳಿ

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version