ತುಮಕೂರು: ಶಿಕ್ಷಕ ಎಂದರೆ ಮಕ್ಕಳ ತಪ್ಪುಗಳನ್ನು ತಿದ್ದಿ ಸರಿ ದಾರಿ ತೋರುವ ಗುರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಇಲ್ಲೊಬ್ಬ ಶಿಕ್ಷಕ ಮಾಡಿರುವ ಕೆಲಸ ಮಾತ್ರ ಇಡೀ ಶಿಕ್ಷಕರ ಕುಲಕ್ಕೆ ಅಪಮಾನ ಮಾಡಿದಂತೆ. ಈತ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕಿಂತ ಹೆಚ್ಚಾಗಿ, ವಿದ್ಯಾರ್ಥಿಗಳ ತಾಯಂದಿರ ಮೊಬೈಲ್ ಸಂಖ್ಯೆ ಪಡೆಯುವುದರಲ್ಲೇ ಹೆಚ್ಚು ಉತ್ಸುಕನಾಗಿದ್ದ.
ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಈತ ಕ್ಲಾಸ್ ರೂಂನಲ್ಲೂ ಮೊಬೈಲ್ನಲ್ಲೇ ಮುಳುಗಿರುತ್ತಿದ್ದ. ಜತೆಗೆ ಅಸಭ್ಯವಾಗಿ ವಿದ್ಯಾರ್ಥಿಗಳ ತಾಯಂದಿರಿಗೆ ಮಸೇಜ್ ಮಾಡುತ್ತಿದ್ದ. ಕೊನೆಗೂ ಈ ಕಾಮುಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕನಾದ ಸುರೇಶ್ ಎಂಬಾತ ಶಾಲೆಗೆ ಬರುವ ವಿದ್ಯಾರ್ಥಿಗಳಿಂದ ಅವರ ತಾಯಿಯರ ಮೊಬೈಲ್ ಸಂಖ್ಯೆ ಪಡೆಯುತ್ತಿದ್ದ. ಶಾಲೆ ಮುಗಿದ ಬಳಿಕ ತಾಯಂದಿರ ವಾಟ್ಸ್ಆ್ಯಪ್‌ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಕೊನೆಗೆ ಗ್ರಾಮದ ಮಹಿಳೆಯರೆಲ್ಲರೂ ಸೇರಿ ಶಿಕ್ಷಕ ಸುರೇಶ್ ವಿರುದ್ಧ ಡಿಡಿಪಿಐಗೆ ದೂರು ನೀಡಿದ್ದರು.
ಅಶ್ಲೀಲ ಮೇಸೆಜ್ ಕಳಿಸುವುದಲ್ಲದೆ ಗ್ರಾಮದ ಯುವಕರೊಂದಿಗೆ ಪ್ರತಿನಿತ್ಯ ಪಾರ್ಟಿಯನ್ನೂ ಮಾಡುತ್ತಿದ್ದ ಎಂಬ ಆರೋಪವನ್ನು ಕೂಡ ಮಾಡಲಾಗಿದೆ. ದೂರಿನನ್ವಯ ತನಿಖೆ ನಡೆಸಿದ ಮಧುಗಿರಿಯ ಡಿಡಿಪಿಐ ರೇವಣ ಸಿದ್ದಪ್ಪ, ಮಂಗಳವಾರ (ಜೂನ್.28) ಶಿಕ್ಷಕ ಸುರೇಶ್ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ| ಚೀನಾದ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಜನಾಂಗೀಯ ಚಿತ್ರ!