Site icon Vistara News

Teacher Transfer | ಬಡ್ತಿ ನೀಡದೇ ಶಿಕ್ಷಕರ ವರ್ಗಾವಣೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಕ್ಷೇಪ

government to restarting the transfer process shortly

ಬೆಂಗಳೂರು: ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಬಡ್ತಿ ನೀಡದೇ ಶಿಕ್ಷಕರ ಹೆಚ್ಚುವರಿ/ಮರು ಹೊಂದಾಣಿಕೆ ಪ್ರಕ್ರಿಯೆ (Teacher Transfer) ನಡೆಸಲು ಮುಂದಾಗಿರುವುದಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ.

ಡಿಸೆಂಬರ್‌ 28 ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ರಾಜ್ಯದ ಎಲ್ಲ ಇಲಾಖೆಗಳಲ್ಲಿ ಬಡ್ತಿ ಪ್ರಕ್ರಿಯೆಗಳನ್ನು ನಡೆಸಲು ನಿರ್ದೇಶನ ನೀಡಿದೆ. ಅಲ್ಲದೆ ಡಿ.31 ರಂದು ಸರ್ಕಾರ, ಈ ಹಿಂದೆ ಬಡ್ತಿ ನೀಡುವುದನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಪತ್ರವನ್ನು ಕೂಡ ಹಿಂದಕ್ಕೆ ಪಡೆದಿದೆ. ಹೀಗಿರುವಾಗ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡದೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಮತ್ತು ವರ್ಗಾವಣೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಸಂಘ ಹೇಳಿದೆ.

ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳ ಹುದ್ದೆಗೆ ಹಾಗೂ ಮುಖ್ಯ ಗುರುಗಳ ಹುದ್ದೆಯಿಂದ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ನೀಡಬೇಕಾಗಿದೆ. ಬಡ್ತಿ ನೀಡದೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗುತ್ತಿದ್ದು, ರಾಜ್ಯದಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹೆಚ್ಚುವರಿಯಾಗುವ ಸಾಧ್ಯತೆಗಳಿವೆ. ಮುಂದೆ ಬಡ್ತಿ ನೀಡಿದಲ್ಲಿ ಮೂರರಿಂದ ನಾಲ್ಕು ಸಾವಿರ ಶಿಕ್ಷಕರು ಬಡ್ತಿ ಹೊಂದುವ ಸಾಧ್ಯತೆಗಳಿರುತ್ತವೆ. ಇದರಿಂದ ಹೆಚ್ಚುವರಿಯಾಗುವ ಶಿಕ್ಷಕರಿಗೆ ಹಾಗೂ ಶಾಲಾ ಶೈಕ್ಷಣಿಕ ವ್ಯವಸ್ಥೆಗೆ ಹಾಗೂ ಪರೀಕ್ಷೆಯ ಸಂದರ್ಭದಲ್ಲಿ ಶಾಲಾ ವ್ಯವಸ್ಥೆಗೆ ಅನಕೂವಾಗುತ್ತದೆ ಎಂದು ಸಂಘ ವಿವರಿಸಿದೆ.

ಮುಂದಿನ ಮಾರ್ಚ್‌ 31 ರ ಹೊತ್ತಿಗೆ ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ವಯೋ ನಿವೃತ್ತಿ ಹೊಂದುತ್ತಿದ್ದು, ಬಡ್ತಿ ಪ್ರಕ್ರಿಯೆಗಳನ್ನು ಜರುಗಿಸದೇ ಹೆಚ್ಚುವರಿ ಪ್ರಕ್ರಿಯೆ ವರ್ಗಾವಣೆಗಳನ್ನು ನಡೆಸಿದರೆ ನಿವೃತ್ತರಾಗಲಿರುವ ಶಿಕ್ಷಕರಿಗೆ ಬಡ್ತಿ ಸಿಗದೇ ಹೋಗಬಹುದು ಎಂದಿರುವ ಸಂಘ ಹೆಚ್ಚುವರಿ/ವರ್ಗಾವಣೆ ಪ್ರಕ್ರಿಯೆಗಳ ನಂತರ ಬಡ್ತಿ ಪ್ರಕ್ರಿಯೆಗಳನ್ನು ನಡೆಸುವುದರಿಂದ ಸತತವಾಗಿ ಹೆಚ್ಚಿನ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಿಗೆ ಬಡ್ತಿ ನೀಡಿ ಕೊಡಬೇಕಾಗುವ ಹುದ್ದೆಗಳಲ್ಲಿ ವ್ಯತ್ಯಾಸವಾಗಿ ಸೇವಾ ಹಿರಿತನ ಹೊಂದಿದ ಜಿಲ್ಲೆಯ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದು ಸಂಘ ಹೇಳಿದೆ.

ವಿಷಯವಾರು ಹೆಚ್ಚುವರಿ ಶಿಕ್ಷಕರನ್ನು ಗುರುತು ಬೇಡ
ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಾಗ ಯಾವುದೇ ಕಾರಣಕ್ಕೂ ವಿಷಯವಾರು ಹೆಚ್ಚುವರಿ ಪ್ರಕ್ರಿಯೆಗಳನ್ನು ಕೈಗೊಳ್ಳಲೇಬಾರದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತೆ ಒತ್ತಾಯಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಂಗಳವಾರ ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರನ್ನು ಭೇಟಿಯಾಗಿ ಮತ್ತೆ ಮನವಿ ಸಲ್ಲಿಸಿದ್ದಾರೆ. ಶಾಲೆಯಲ್ಲಿ ಮಂಜೂರಾದ ಹುದ್ದೆಗಳಿಗೆ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ ಹೆಚ್ಚುವರಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿರುವ ಅವರು, ದೈಹಿಕ, ಚಿತ್ರಕಲಾ, ಹಿಂದಿ, ಇಂಗ್ಲೀಷ್ ಶಿಕ್ಷಕರಿಗೂ ಕೂಡ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.
ಹೆಚ್ಚುವರಿ ಪ್ರಕ್ರಿಯೆಗಳಿಗಿಂತ ಮುಂಚೆ ಬಡ್ತಿ ಪ್ರಕ್ರಿಯೆಗಳನ್ನು ಜರುಗಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಶೇ.99 ಶಿಕ್ಷಕರನ್ನು ತಾಲೂಕಿನ ಒಳಗಡೆ ತೊಂದರೆಯಾಗದ ರೀತಿಯಲ್ಲಿ ಹೆಚ್ಚುವರಿ ಪ್ರಕ್ರಿಯೆ ಮಾಡುವಂತೆ ನಿರ್ದೇಶನ ನೀಡಲಾಗುವುದು ಎಂದು ರಿತೇಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ ಎಂದ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

ಎಸ್‌ಸಿ/ಎಸ್‌ಟಿ ಹೊಸ ಮೀಸಲಾತಿಯನ್ವಯ ಬಡ್ತಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸರ್ಕಾರ ಸೂಚಿಸಿದ್ದರೂ ಶಿಕ್ಷಣ ಇಲಾಖೆಯು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಇದರಿಂದ ಶಿಕ್ಷಕ ವೃಂದಕ್ಕೆ ಅತ್ಯಂತ ನೋವಾಗಿದೆ. ಕೂಡಲೇ ಇಲಾಖೆಯು ಶಿಕ್ಷಕರ ನ್ಯಾಯಯುತ ಬೇಡಿಕೆಯಾದ ಬಡ್ತಿಯ ಕುರಿತು ಕೂಡಲೇ ಗಮನ ನೀಡಿ, ಬಡ್ತಿ ನೀಡಿಯೇ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಬೇಕೆಂದು ರಾಜ್ಯದ ಶಿಕ್ಷಕರ ಪರವಾಗಿ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಗಲಿ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಇದನ್ನೂ ಓದಿ | Teacher Transfer | ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಪಡೆದ ಶಾಲಾ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ

Exit mobile version