ಬೆಂಗಳೂರು: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ತೀವ್ರ ಒತ್ತಾಯಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 12 ಸಾವಿರ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ 10ರಿಂದ 12 ಸಾವಿರ ಶಿಕ್ಷಕರನ್ನು ನೇಮಕ (Teachers Recruitment) ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿರುವ ಸಚಿವರು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 12 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಮುಂದಿನ ದಿನಗಳಲ್ಲಿ 10ರಿಂದ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದ್ದು, ಅನುಮತಿ ಸಿಕ್ಕ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ತಕ್ಷಣಕ್ಕೆ ಸಮಸ್ಯೆ ಪರಿಹರಿಸಲು ಈ ಶೈಕ್ಷಣಿಕ ವರ್ಷಾರಂಭದಲ್ಲೇ 50 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅನುದಾನಿತ ಶಾಲೆಗಳಲ್ಲಿ 2016ರಿಂದ 2020ರ ವರೆಗೆ ಖಾಲಿ ಇರುವ ಶಿಕ್ಷಕರ ಭರ್ತಿಗೆ ಆದೇಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 2 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದ್ದು, 1,008 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕೇವಲ 28 ದಿನಗಳಲ್ಲಿ 32 ಸಾವಿರ ಮಕ್ಕಳು ದಾಖಲಾಗುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ವರ್ಷದ ವೇಳೆಗೆ ಇನ್ನೂ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಇಂತಹ 3 ಸಾವಿರ ಶಾಲೆ ತೆರೆಯಲು ಉದ್ದೇಶಿಸಲಾಗಿದೆ. ಇದರಿಂದ 45 ಲಕ್ಷ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ‘ಮುಂದಿನ ವರ್ಷದಿಂದ 50 ಸಾವಿರ ಮಕ್ಕಳಿಗೆ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಈ ವರ್ಷ 25 ಸಾವಿರ ಮಕ್ಕಳು ತರಬೇತಿಗೆ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | KPSC Exam: ಆ.25ರಂದು 384 ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ
ಶಿಕ್ಷಕರ ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ
ಶಿಕ್ಷಕರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿಕ್ಷಕರಿಂದ ಕೆಲ ಬೇಡಿಕೆಗಳಿವೆ. ನಾಲ್ಕೈದು ದಿನಗಳ ಹಿಂದೆ ಸಭೆ ಕರೆದಿದ್ದೆ. ನಾವು ಪ್ರತಿಭಟನೆ ಕರೆದುಬಿಟ್ಟಿದ್ದೀವಿ, ಹೀಗಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ನಾನು ಹೋಗಿ ಮನವಿ ಪಡೆದು ಬಳಿಕ ಏನು ಮಾಡಬೇಕೋ ಪರಿಶೀಲನೆ ಮಾಡುತ್ತೇನೆ. ಇದು ನನ್ನ ಅವಧಿಯಲ್ಲಿ ಆಗಿರುವ ಸಮಸ್ಯೆಯಲ್ಲ. 2017ರಲ್ಲಿ ಆಗಿರೋ ವಿಚಾರ ಇದು, ಆಗಲೇ ಇವರು ಸ್ವಲ್ಪ ಒತ್ತಡ ಹಾಕಬೇಕಿತ್ತು. ಆದರೆ ಇಲ್ಲಿಯವರೆಗೂ ಅದು ಎಳೆದುಕೊಂಡು ಬಂದಿದೆ. ಅದು ನನ್ನ ಮಟ್ಟದಲ್ಲಿ ಅನ್ನೋಕ್ಕಿಂತ, ಮುಖ್ಯಮಂತ್ರಿ ಮಟ್ಟದಲ್ಲಿ ನಿರ್ಧಾರ ಆಗೋ ವಿಚಾರ. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಅವರಿಗೆ ನಿವೃತ್ತಿ ಸಮಯದಲ್ಲಿ ಪ್ರಮೋಷನ್ ಆಗೋ ಆಸೆ ಇರುತ್ತೆ. ಹೀಗಾಗಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.