ಹಾವೇರಿ: ರಾಜ್ಯದಲ್ಲಿ ಈ ವರ್ಷದಲ್ಲಿ 8,100 ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ಪ್ರಮಾಣದ ಶಾಲಾ ಕೊಠಡಿಗಳ ನಿರ್ಮಾಣ ಕೈಗೊಳ್ಳಲಾಗಿದೆ. 15,000 ಶಿಕ್ಷರನ್ನು ಏಕಕಾಲದಲ್ಲಿ (Teachers Recruitment) ನೇಮಕ ಮಾಡಲಾಗಿದೆ. ಈ ವರ್ಷ ಇನ್ನೂ 15,000 ಶಿಕ್ಷಕರ ನೇಮಕ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳ ಹಂತಕ್ಕೆ ಹೋಗಿ ಗ್ರಾಮೀಣ ಪ್ರದೇಶದ ಎಲ್ಲ ಶಿಕ್ಷಣದ ಪರಿಸ್ಥಿತಿ ಅರಿತು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ತೆವರಮೆಳ್ಳಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೀಘ್ರವೇ ನಾಲ್ಕು ಹೊಸ ಕೊಠಡಿ ನಿರ್ಮಾಣ ಮಾಡಲು ಆದೇಶ ನೀಡಲಾಗುವುದು ಹಾಗೂ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ 15 ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಗ್ರಾಮಕ್ಕೆ 21 ಕೋಟಿ ರೂ.ಗಳನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಬೆಟ್ಟದಂತೆ ಬಂದ ಜನ. ಮುಗಿಯಿತೇ ಸಮ್ಮಿಲನ?
ಈ ಗ್ರಾಮದ ಶಾಲೆಗೆ 135 ವರ್ಷ ಆಗಿದೆ. ಈ ಶಾಲೆ ಆರಂಭಿಸಲು ಆಲೋಚನೆ ಮಾಡಿದ ಹಿರಿಯರಿಗೆ ನನ್ನ ನಮನಗಳು. ಇಲ್ಲಿ ಪಾಠ ಮಾಡಿದ ಶಿಕ್ಷಕರು, ಇಲ್ಲಿ ಕಲಿತು ನಾಡಿನ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯರಿಗೆ ನನ್ನ ನಮನಗಳು ಎಂದ ಅವರು, ನೂರು ವರ್ಷ ಸಾಧನೆ ಮಾಡಿರುವ ಈ ಶಾಲೆ ಒಂದು ವಿಶ್ವ ವಿದ್ಯಾಲಯಕ್ಕಿಂತ ದೊಡ್ಡದು. ವಿಶ್ವ ವಿದ್ಯಾಲಯದಲ್ಲಿ ಪಾಠ ಮಾಡುವ ಅಧ್ಯಾಪಕರನ್ನು ತಯಾರಿಸುವುದು ಈ ಪ್ರಾಥಮಿಕ ಶಾಲೆಗಳು. ಮಕ್ಕಳಿಗೆ ಈ ಶಾಲೆಯೇ ಬುನಾದಿ, ಇಲ್ಲಿ ಕಲಿಯುವ ಪಾಠದಿಂದ ಅರ್ಥ, ಜ್ಞಾನ ವಿಜ್ಞಾನ, ತಂತ್ರಜ್ಞಾನ ಹೀಗೆ ಶಿಕ್ಷಣ ಬೆಳೆಯುತ್ತಿದೆ ಎಂದರು.
ಮಕ್ಕಳು ಜೀವನದಲ್ಲಿ ಛಲದಿಂದ ನುಗ್ಗಬೇಕು
ತೆವರಮೆಳ್ಳಹಳ್ಳಿ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಬೇಕಿದೆ. 21ನೇ ಜ್ಞಾನದ ಶತಮಾನದಲ್ಲಿ ತಯಾರಿ ನೀಡಬೇಕು. ಈ ಶಾಲೆಗೆ ಚರಿತ್ರೆ ಇದೆ. ಮಕ್ಕಳಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಬೇಕಿದೆ. ಒಮ್ಮೆ ವಿದ್ಯಾರ್ಥಿಯಾದರೆ ಜೀವನ ಪರ್ಯಂತ ಕಲಿಕೆ ಇರುತ್ತದೆ. ಮಕ್ಕಳು ಜೀವನದಲ್ಲಿ ಛಲದಿಂದ ನುಗ್ಗಬೇಕು. ಆಟ ಆಡುವಾಗ ಸೋಲಬಾರದು ಎಂದು ಆಡುವುದಕ್ಕಿಂತ ಗೆಲ್ಲಬೇಕು ಎಂದು ಆಡಬೇಕಾಗಿದ್ದು, ಈ ಗೆಲುವಿಗೆ ಛಲದಿಂದ ಹಾಗೂ ಆತ್ಮವಿಶ್ವಾಸದಿಂದ ನಡೆಯಬೇಕು ಎಂದರು.
ಮಕ್ಕಳು ಕಲಿತ ಶಾಲೆ, ಶಿಕ್ಷಕರು, ಊರನ್ನು ಮರೆಯಬಾರದು
ಜಗತ್ತಿನ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಹತ್ತಿದವರು ತೇನ್ ಸಿಂಗ್. ಅವನ ತಾಯಿ ಚಿಕ್ಕವನಿದ್ದಾಗಿನಿಂದಲೂ ಎವರೆಸ್ಟ್ ಹತ್ತುವಂತೆ ಪ್ರೇರೆಪಿಸಿದ್ದರು. ಇದರಿಂದ 42ನೇ ವಯಸ್ಸಿನಲ್ಲಿ ಆತ ಎವರೆಸ್ಟ್ ಹತ್ತಿದ್ದ. ಆದರೆ 10ನೇ ವರ್ಷದಿಂದಲೇ ಆತ ಎವರೆಸ್ಟ್ ಹತ್ತಲು ತೀರ್ಮಾನ ಮಾಡಿದ್ದ. ಅದೇ ರೀತಿ ಮಕ್ಕಳು ಮುಂದೇನಾಬೇಕೆಂದು ಈಗಿನಿಂದಲೇ ತೀರ್ಮಾನ ಮಾಡಿ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಮಕ್ಕಳು ಕಲಿತು ದೊಡ್ಡವರಾದ ನಂತರ, ತಾವು ಕಲಿತ ಶಾಲೆ, ಶಿಕ್ಷಕರು ಹಾಗೂ ಊರನ್ನು ಮರೆಯಬಾರದು ಎಂದ ಅವರು, ಗೆಲುವಿಗಾಗಿ ಛಲದಿಂದ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಬಂಕಾಪುರದ ರೇವಣಸಿದ್ದೇಶ್ವರ ಶ್ರೀಗಳು, ಸಿಂಧಗಿಯ ಸಾರಂಗ ಮಠದ ಶ್ರೀಗಳು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಐಜಿ ಸನದಿ ಹಾಗೂ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | Karnataka Election : ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ: ಸಿದ್ದರಾಮಯ್ಯ ಕಿಡಿ