Site icon Vistara News

Teachers suspended : ಮೋದಿ ಕೇರ್‌ ಚೈನ್‌ ಲಿಂಕ್‌ ವ್ಯವಹಾರದಲ್ಲಿ ತೊಡಗಿದ್ದ ಶಿಕ್ಷಕರ ಅಮಾನತು: ಶಿಕ್ಷಣ ಇಲಾಖೆ ಆದೇಶ

Teachers irregularity

#image_title

ಬೆಂಗಳೂರು: ಶಾಲೆಯಲ್ಲಿ ಪಾಠ ಮಾಡುವುದು ಬಿಟ್ಟು ಮೋದಿ ಕೇರ್‌ ಸೇರಿದಂತೆ ಪ್ರಾಡಕ್ಟ್‌ಗಳ ಮಾರಾಟಕ್ಕೆ ಇಳಿದಿದ್ದ ಚಿತ್ರದುರ್ಗ ಜಿಲ್ಲೆಯ ಎಂಟು ಶಿಕ್ಷಕರನ್ನು ಅಮಾನತು (Teachers suspended) ಮಾಡಲಾಗಿದೆ.

ಇವರು ಮೋದಿ ಉತ್ಪನ್ನಗಳು, ಇತರ ಕೆಲವು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಚೈನ್‌ ಲಿಂಕ್‌ ವ್ಯವಹಾರದಲ್ಲಿ ತೊಡಗಿದ್ದು ಶಾಲೆಗಳಲ್ಲಿ ಪಾಠ ಪ್ರವಚನ ಮಾಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು, ಶಿಕ್ಷಣ ಇಲಾಖೆಗೆ ಲಿಖಿತ ದೂರು ಕೂಡಾ ಹೋಗಿತ್ತು. ಇಲಾಖೆ ಈಗ ಇವರ ಮೇಲಿನ ದೂರನ್ನು ಪರಿಶೀಲಿಸಿ ಸತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿದೆ.

ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಈ ತನಿಖೆ ನಡೆದಿದ್ದು, ಆರೋಪ ಕೇಳಿಬಂದ ಎಂಟು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಇವರ ವಿರುದ್ಧ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ೧೬ ಶಿಕ್ಷಕರ ವಿಚಾರಣೆ ನಡೆದಿತ್ತು. ಅವರ ಪೈಕಿ ೮ ಜನ ಶಿಕ್ಷಕರು ಅಗತ್ಯ ದಾಖಲೆ‌ ನೀಡಿ ವಿವರಣೆ ನೀಡಿದ್ದರು. ಉಳಿದ ಎಂಟು ಮಂದಿಯ ವಿಚಾರಣೆ ವೇಳೆ ವಿವರಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಅಮಾನತುಗೊಂಡ ಶಿಕ್ಷಕರು ಇವರು

-ಹೊಳ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರವಿ ಕುಮಾರ್
-ರಾಮಗಿರಿ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್
-ಗುಯಿಳಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಮ್ಮ
-ಪಾಲವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದ್ರಾಣಿ
-ಹಿಂಡಸಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಲಜಾ
-ಪರಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜುಳಾ ಶ್ರೀನಿವಾಸ್ ಹಾಗೂ ರಂಗಪ್ಪ
-ದೊಡ್ಡಲಗಟ್ಟದ ಸರ್ಕಾರಿ ಪ್ರೌಢ ಶಾಲೆಯ ಶಿವಕುಮಾರ್

ಸಮಗ್ರ ತನಿಖೆ ನಡೆಯಲಿ ಎಂದ ಲೋಕೇಶ್‌ ತಾಳಿಕಟ್ಟೆ

ತಾವು ನೀಡಿದ ದೂರಿನ ಆಧಾರದಲ್ಲಿ ಎಂಟು ಶಿಕ್ಷಕರನ್ನು ಅಮಾನತು ಮಾಡಿದ್ದನ್ನು ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸ್ವಾಗತಿಸಿದ್ದಾರೆ. ಆದರೆ, ಇದು ಕೇವಲ ಎಂಟು ಜನರಿಗೆ ಸೀಮಿತವಾಗಬಾರದು ಎಂದು ಹೇಳಿದ್ದಾರೆ. ತಾವು ಈ ಹಿಂದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಭ್ರಷ್ಟಾಚಾರದಲ್ಲಿ ತೊಡಗಿರುವುದು, ಚೈನ್‌ ಲಿಂಕ್‌ ವ್ಯವಹಾರ ಮಾಡುತ್ತಿರುವ ಬಗ್ಗೆ ದಾಖಲೆಗಳ ಆಧಾರದಲ್ಲಿ ದೂರು ನೀಡಿದ್ದೆವು. ಅದರ ಬಗ್ಗೆ ತನಿಖೆ ಮಾಡಿದ್ದಾರೆ. ಆದರೆ ಕೇವಲ ಚಿತ್ರದುರ್ಗಕ್ಕೆ ಸೀಮಿತವಾಗಿ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಸ್ವಾಗತಿಸುತ್ತೇವೆ. ಆದರೆ ಇದು ರಾಜ್ಯಕ್ಕೆ ವಿಸ್ತರಣೆಯಾಗಬೇಕು, ಸಮಗ್ರ ತನಿಖೆಯಾಗಬೇಕು ಎಂದು ತಾಳಿಕಟ್ಟೆ ಅವರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಕರು ತಮ್ಮ ಕೆಲಸ ಬಿಟ್ಟು ಮೋದಿ ಕೇರ್‌ ಮತ್ತು ಇತರ ಕೆಲವು ನಕಲಿ ಪ್ರಾಡಕ್ಟ್‌ ಮಾರಾಟ ಮಾಡುತ್ತಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೂ ಮಾಡುವ ಅಪಮಾನ ಎಂದಿದ್ದಾರೆ ಲೋಕೇಶ್‌ ತಾಳಿಕಟ್ಟೆ.

ಇದನ್ನೂ ಓದಿ : Teacher suicide: ಶಿಕ್ಷಕ ಆತ್ಮಹತ್ಯೆ ವಿರುದ್ಧ ಬೀದಿಗಳಿದ ಶಿಕ್ಷಕರು, ಸಂಬಂಧಿಕರು; ಬಿಇಒ ಸೇರಿ ನಾಲ್ವರು ಸಸ್ಪೆಂಡ್‌

Exit mobile version