ಬೆಂಗಳೂರು: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಈ ವಿಧೇಯಕದಿಂದ ರಾಜ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಸರಳಗೊಂಡಿವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸಂಘದ ನಿರಂತರ ಪ್ರಯತ್ನದ ಫಲವಾಗಿ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಮಂಡನೆಯಾಗಿದೆ. ಹತ್ತು ವರ್ಷದ ಸೇವೆ, ಅಖಂಡ 15 ವರ್ಷದ ಸೇವೆಯನ್ನು ಪರಿಗಣಿಸಿ ಶಿಕ್ಷಕರಿಗೆ ಶೇ.25ರಷ್ಟು ಖಾಲಿ ಹುದ್ದೆಗಳ ಮಿತಿಯಿಲ್ಲದೆ ಖಾಲಿ ಹುದ್ದೆಗಳಿಗೆ ವರ್ಗಾವಣೆಗೆ ಅವಕಾಶ, ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಸೇವೆಗೆ ಸೇರಿದ ಮೊದಲ 5 ವರ್ಷ, ನಿವೃತ್ತಿ ಹೊಂದುವುದಕ್ಕಿಂತ ಮುಂಚಿನ 5 ವರ್ಷ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪರಸ್ಪರ ವರ್ಗಾವಣೆಗೆ ಅವಕಾಶ, ಪ್ರತಿ 3 ವರ್ಷಕ್ಕೊಮ್ಮೆ ಸೇವಾವಧಿಯಲ್ಲಿ ಎಷ್ಟು ಬಾರಿ ಬೇಕಾದರೂ ಪರಸ್ಪರ ವರ್ಗಾವಣೆ ಹೊಂದಲು ಅವಕಾಶ ದೊರೆತಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಈಗ ಆನ್‌ಲೈನ್ ವ್ಯಾಪ್ತಿಗೆ ಶಿಕ್ಷಕರ ಅಗತ್ಯ ಸೇವೆ: ಶಿಕ್ಷಣ ಇಲಾಖೆಗೆ ಪ್ರಾಥಮಿಕ ಶಿಕ್ಷಕರ ಸಂಘ ಅಭಿನಂದನೆ
ಪತ್ನಿ-ಪತ್ನಿ ವರ್ಗಾವಣೆ ಇನ್ನು ಸುಲಭ
ಪತಿ-ಪತ್ನಿ ವಿಚಾರದಲ್ಲಿ ಪತಿ ಅಥವಾ ಪತ್ನಿ ಕೆಲಸ ಮಾಡುವ ತಾಲೂಕುಗಳಲ್ಲಿ ಖಾಲಿ ಹುದ್ದೆಗಳು ಲಭ್ಯತೆ ಇಲ್ಲದೆ ಹೋದಲ್ಲಿ ಪಕ್ಕದ ತಾಲೂಕಿಗೆ ವರ್ಗಾವಣೆ ಹೊಂದಲು ಅವಕಾಶ, ಶೇ. 25ಕ್ಕಿಂತ ಖಾಲಿ ಹುದ್ದೆಗಳಿರುವ ತಾಲೂಕಿನ ಒಳಗಡೆ ಕೂಡ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಸಿಆರ್‌ಪಿ, ಬಿಆರ್‌ಪಿಯಾಗಿ 3 ವರ್ಷ ಅಥವಾ 5 ವರ್ಷ ಸೇವೆ ಪೂರೈಸಿರುವವರಿಗೆ ಶಾಲೆಗೆ ಹೋಗಲು ಕೌನ್ಸೆಲಿಂಗ್‌ನಲ್ಲಿ ಅವಕಾಶ. ಯಾವುದೇ ಆದ್ಯತೆಯನ್ನು ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಪಡೆಯತಕ್ಕದ್ದು. ಮಲೆನಾಡು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಹಾಗೂ ಹೈದ್ರಾಬಾದ್-ಕರ್ನಾಟಕದ ತಾಲೂಕುಗಳಿಗೆ ಒಳಗಡೆ ಬರುವವರಿಗೆ ಯಾವುದೇ ವರ್ಗಾವಣೆ ಮಿತಿಯಿಲ್ಲ ಎಂಬ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.
ಎಲ್ಲ ಅಂಶಗಳನ್ನು ತಿದ್ದುಪಡಿ ಮಾಡುವುದರ ಮೂಲಕ ರಾಜ್ಯದ ಸಮಸ್ತ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ ನಾಗೇಶ್, ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತ ಆರ್.ವಿಶಾಲ್ ಹಾಗೂ ಪ್ರಾಥಮಿಕ ಶಿಕ್ಷಣದ ನಿರ್ದೇಶಕ ಪ್ರಸನ್ನ ಕುಮಾರ ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಹೌದು, ನನಗೆ ಅಸಮಾಧಾನ ಇದೆ, ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಕೆ.ಎಸ್. ಈಶ್ವರಪ್ಪ ಬಹಿರಂಗ ಹೇಳಿಕೆ