Site icon Vistara News

Tejaswini Gowda: ಕಾಂಗ್ರೆಸ್‌ ಸೇರಿದ ತೇಜಸ್ವಿನಿ ಗೌಡ; ಬಿಜೆಪಿಯಲ್ಲಿ ಬುದ್ಧಿವಂತರಿಗೆ ಜಾಗವಿಲ್ಲ ಎಂದಿದ್ದು ಯಾಕೆ?

Tejaswini Gowda

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯೆ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಡಾ.ತೇಜಸ್ವಿನಿ ಗೌಡ (Tejaswini Gowda) ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ನವ ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್‌, ಪವನ್‌ ಖೇರಾ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ ಸೇರ್ಪಡೆಯಾದರು. ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರುವ ತೇಜಸ್ವಿನಿ ಗೌಡ ಅವರು, ಬಿಜೆಪಿಯಲ್ಲಿ ಬುದ್ಧಿವಂತರಿಗೆ ಜಾಗವಿಲ್ಲ, ಅವರಿಗೆ ಸಂಸದೀಯ ಪಟುಗಳು ಬೇಡ, ಗುಲಾಮರ ತರ ಇರೋರು ಬೇಕು ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನನ್ನ ಮನೆಗೆ ನಾನು ವಾಪಸ್ ಬಂದಿದ್ದೇನೆ‌. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಜೀ, ಸಿದ್ದರಾಮಯ್ಯ, ಡಿಕೆಶಿ ಎಲ್ಲರೂ ನನಗೆ ಪ್ರೇರಣೆ. ಕಾಂಗ್ರೆಸ್ ಪಕ್ಷ, ಬಿಜೆಪಿಗಿಂತ 95 ವರ್ಷಗಳ ಹಳೇ ಪಕ್ಷ. ದೆಹಲಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಬೇಕು ಎಂಬುವುದು ಹೈ ಕಮಾಂಡ್ ತೀರ್ಮಾನ. ಅವರು ಹೇಳಿದಂತೆ ನಾನು ಇಲ್ಲಿ ಬಂದು ಪಕ್ಷ ಸೇರಿದ್ದೇನೆ ಎಂದು ಹೇಳಿದರು.

ಬಿಜೆಪಿ ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿಲ್ಲ, ನಾನು ಬಿಜೆಪಿಯಲ್ಲಿ ಅವಕಾಶ ಕೇಳಿದ್ದೆ, ಅದು ಕೂಡ ಬಹಿರಂಗವಾಗಿ ಕೇಳಿಲ್ಲ, ಮೈಸೂರು-ಕೊಡಗು ಕ್ಷೇತ್ರಕ್ಕೆ ಅವಕಾಶ ನೀಡಿ ಎಂದು ಕೇಳಿದ್ದೆ, ಇಲ್ಲವಾದಲ್ಲಿ ಬೆಂಗಳೂರು ಉತ್ತರ ಕೊಡಿ ಅಂತ ಕೇಳಿದ್ದೆ. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದರೆ ಮಾತ್ರ ನನಗೆ ನೀಡಿ ಎಂದು ಕೇಳಿದ್ದೆ. ಆದರೆ ಬಿಜೆಪಿಯವರಿಗೆ ಬುದ್ಧಿವಂತರು ಬೇಕಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Tejaswini Gowda

ಇದನ್ನೂ ಓದಿ | Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್;‌ ಮೋದಿ ಬಂದರೂ ಹೆದರಲ್ಲ!

ಹಾಲಿ ಸಂಸದರು, ಸಚಿವರನ್ನು ಯಾಕೆ ಬದಲಾವಣೆ ಮಾಡಬೇಕು? ಶೋಭಾ ಕರಂದ್ಲಾಜೆ ಅವರನ್ನು ಬದಲಾವಣೆ ಮಾಡಿದ್ದು ಯಾಕೆ? ಅಲ್ಲಿ ಮೋದಿ ಹವಾ ಇಲ್ಲವೇ?, ಸಿಟ್ಟಿಂಗ್ ಎಂಪಿಗೆ ಮೋದಿ ಹವಾ ಸಾಲುವುದಿಲ್ಲವೇ? ಶೋಭಾ ನನ್ನ ಸಹೋದರಿ ತರಹ, ಕೇವಲ ಅವರ ಬಗ್ಗೆ ಮಾತನಾಡಲ್ಲ. ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದ್ದರೆ, ಮೋದಿ ಶಕ್ತಿ ಎಲ್ಲವೂ ಇದ್ದ ಮೇಲೆ 6 ಬಾರಿಯ ಸಂಸದರಾಗಿದ್ದ ಹಿಂದುತ್ವದ ಫೈರ್ ಬ್ರ್ಯಾಂಡ್ ಅನಂತ್‌ ಕುಮಾರ್‌ ಅವರನ್ನು ಯಾಕೆ ಬದಲಾಯಿಸಿದರು. ಬಿಜೆಪಿಯವರಿಗೆ ಸಂಸದೀಯ ಪಟುಗಳು ಬೇಡ, ಗುಲಾಮರ ತರ ಇರೋರು ಬೇಕು. ಆ ಪಕ್ಷದಲ್ಲಿ ಬುದ್ಧಿವಂತರಿಗೆ ಅವಕಾಶ ಇಲ್ಲ. ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದು ಸತ್ಯ, ಆದರೆ ಕಾಂಗ್ರೆಸ್‌ಗೆ ಬಂದಿರುವುದು ಟಿಕೆಟ್ ಆಸೆಗಾಗಿ ಅಲ್ಲ ಎಂದು ಹೇಳಿದರು.

ಟಿಕೆಟ್‌ ಸಿಗದಿದ್ದಕ್ಕೆ ಬೇಸರ?

ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ (HD Devegowda) ಮಣಿಸಿದ್ದ ಡಾ. ತೇಜಸ್ವಿನಿ ಗೌಡ (Tejaswini Gowda) ಅವರು ಅವಧಿಗೆ ಮುಂಚೆಯೇ ತಮ್ಮ ಸದಸ್ಯತ್ವಕ್ಕೆ ಇತ್ತಿಚೆಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಜೂನ್‌ವರೆಗೆ ಅವರ ಅವಧಿ ಇತ್ತು. ಆದರೆ, ಮೂರು ತಿಂಗಳ ಮುಂಚೆಯೇ ಅವರು ರಾಜೀನಾಮೆಯನ್ನು ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿತ್ತು.

ತೇಜಸ್ವಿನಿ ಗೌಡ ಅವರು ಬೆಂಗಳೂರು ಗ್ರಾಮಾಂತರ ಇಲ್ಲವೇ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ತಮಗೆ ಟಿಕೆಟ್‌ ಸಿಗಬಹುದು ಎಂಬ ಭಾರಿ ನಿರೀಕ್ಷೆಯಲ್ಲಿ ತೇಜಸ್ವಿನಿ ಇದ್ದರು. ಆದರೆ, ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಬಿಜೆಪಿ ಅಖಾಡಕ್ಕೆ ಇಳಿಸಿತ್ತು. ಇದು ತೇಜಸ್ವಿನಿ ಅವರನ್ನು ಹೆಚ್ಚು ಭ್ರಮನಿರಸನ ಮಾಡಿತ್ತು.

Tejaswini Gowda

ಇದನ್ನೂ ಓದಿ | Archana Patil: ಕಾಂಗ್ರೆಸ್‌ಗೆ ಶಾಕ್, ಕೇಂದ್ರದ ಮಾಜಿ ಸಚಿವನ ಸೊಸೆ ಬಿಜೆಪಿ ಸೇರ್ಪಡೆ!

ಇನ್ನು ಕೊನೇ ಆಯ್ಕೆಯಾಗಿದ್ದ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೇಗೂ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಬದಲಾವಣೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹಾಗಾಗಿ ಅಲ್ಲಿಯಾದರೂ ತಮಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ತೇಜಸ್ವಿನಿ ಗೌಡ ಇದ್ದರು. ಇಲ್ಲಿಯೂ ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದ್ದು ಅವರು ಅಸಮಾಧಾನ ಹೆಚ್ಚಲು ಕಾರಣವಾಗಿತ್ತು. ಹೀಗಾಗಿ ಅವರು ತಮ್ಮ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಇದೀಗ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

Exit mobile version