ಬೆಂಗಳೂರು: ಖ್ಯಾತ ಕನ್ನಡ ಕಥೆಗಾರ ವಸುಧೇಂದ್ರ ಅವರ ಐತಿಹಾಸಿಕ ಕಾದಂಬರಿ ʼತೇಜೋ ತುಂಗಭದ್ರಾʼ ಇದೀಗ ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಮೆಜಾನ್ ಆನ್‌ಲೈನ್ ತಾಣದಲ್ಲಿ ಪ್ರಿ ಆರ್ಡರ್ ಲಭ್ಯವಿದೆ.
15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲದ ಕತೆಯನ್ನು ಒಳಗೊಂಡ ಈ ಕಾದಂಬರಿಯನ್ನು ಮೈತ್ರೇಯಿ ಕರ್ನೂರು ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮೂಲ ಕನ್ನಡ ಕೃತಿಯನ್ನು ಛಂದ ಪ್ರಕಾಶನ ಹಾಗೂ ಇಂಗ್ಲಿಷ್ ಆವೃತ್ತಿಯನ್ನು ಪ್ರತಿಷ್ಠಿತ ಪೆಂಗ್ವಿನ್ ಇಂಡಿಯಾ ಪ್ರಕಾಶಿಸಿವೆ. ಕನ್ನಡದಲ್ಲಿ ಎಂಟು ಮುದ್ರಣಗಳನ್ನು ಕಂಡಿದೆ.
ತೇಜೋ ತುಂಗಭದ್ರಾ ಕೃತಿಯು ಎರಡು ನದಿ ತೀರಗಳಲ್ಲಿ ಹಾಗೂ ಒಂದು ಸಾಗರ ತೀರದಲ್ಲಿ ನಡೆಯುತ್ತದೆ. ಕರ್ನಾಟಕದ ತುಂಗಭದ್ರಾ ನದಿ ಹಾಗೂ ಪೋರ್ಚುಗಲ್‌ನ ತೇಜೋ ನದಿಗಳ ತಡಿಯ ಜನಜೀವನ, ಪ್ರೀತಿಪ್ರೇಮ, ಸಾಹಸ, ಸಾಮ್ರಾಜ್ಯಶಾಹಿ ಮತ್ತು ಆಚರಣೆಗಳು, ದ್ವೇಷ ಹಾಗೂ ಯುದ್ಧ, ಕಡಲತೀರ ಗೋವಾದ ಸಂಸ್ಕೃತಿ ಎಲ್ಲವನ್ನೂ ಹದವಾಗಿ ಸೇರಿಸಿಕೊಂಡು ಮನಸೆಳೆಯುವ ಒಂದು ಕಾಲದ ಜನಜೀವನವನ್ನು ಕಟ್ಟಿಕೊಟ್ಟಿರುವ ಈ ಕೃತಿಯನ್ನು ಓದುಗರು ಮೆಚ್ಚಿದ್ದಾರೆ. ʼʼಇದು ಕನ್ನಡದ ಶ್ರೇಷ್ಠ ಐತಿಹಾಸಿಕ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದುʼʼ ಎಂದು ವಿಮರ್ಶಕರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ | ಸಾಲಭಂಜಿಕೆ ಅಂಕಣ: ಚೋಮನ ದುಡಿಯೂ ನಮ್ಮ ನುಡಿಯೂ