ಕಾರವಾರ: ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗೇಳುತ್ತಿದ್ದ ಚಿತ್ರ ನಟರೊಬ್ಬರನ್ನು ರಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದ ಈ ಘಟನೆಯಲ್ಲಿ ರಕ್ಷಣೆಗೆ ಒಳಗಾದವರು ಹೈದರಾಬಾದ್ ಮೂಲದ ಚಿತ್ರ ನಟ ಅಖಿಲ್ ರಾಜ್(26) ರಕ್ಷಿಸಲ್ಪಟ್ಟವರು.
ಗೋಕರ್ಣ, ಇಲ್ಲಿನ ಓಂ ಬೀಚು, ಕುಡ್ಲೆ ಬೀಚುಗಳ ಬಗ್ಗೆ ಕೇಳಿ ತಿಳಿದಿದ್ದ ಅಖಿಲ್ ರಾಜ್ ಗೆಳೆಯರೊಂದಿಗೆ ಆಗಮಿಸಿದ್ದರು. ಸಮುದ್ರದಲ್ಲಿ ಪ್ರಕ್ಷುಬ್ಧವಾಗಿರುವುದರಿಂದ ನೀರಿಗೆ ಇಳಿಯಬೇಡಿ ಎಂದು ಅಲ್ಲಿನ ಸಿಬ್ಬಂದಿ ಎಚ್ಚರಿಸಿದ್ದರು. ಆದರೆ, ಅಖಿಲ್ ರಾಜ್ ಅದನ್ನು ಲೆಕ್ಕಿಸದೆ ನೀರಿಗೆ ಇಳಿದೇ ಬಿಟ್ಟಿದ್ದರು.
ಆದರೆ, ಸುಮಾರು ೫೦ ಮೀಟರ್ ದೂರ ಸಾಗುತ್ತಿದ್ದಂತೆಯೇ ನೀರಿನ ಅಲೆಗಳಿಗೆ ಸಿಲುಕಿದರು. ಅಲ್ಲಿಂದಲೇ ರಕ್ಷಣೆಗೆ ಕೂಗಿಕೊಂಡರು. ಕೂಡಲೇ ದಡದಲ್ಲಿದ್ದ ಮಿಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಸ್ಪೀಡ್ ಬೋಟ್‌ನಲ್ಲಿ ತೆರಳಿ ಅವರನ್ನು ನೀರಿನಿಂದ ಮೇಲೆತ್ತಿ ತರುವಲ್ಲಿ ಯಶಸ್ವಿಯಾದರು.
ಸಿಬ್ಬಂದಿ ಈ ರಕ್ಷಣಾ ಕಾರ್ಯಾಚರಣೆಗೆ ಜೆಟ್ ಸ್ಕೀ ಎನ್ನುವ ವಿಶೇಷ ಬೋಟನ್ನು ಬಳಸಿದ್ದರು. ಈ ನಡುವೆ, ಸಿಬ್ಬಂದಿ ಸಮುದ್ರಕ್ಕೆ ಇಳಿದು ರಕ್ಷಣೆ ನಡೆಸಿ ರಕ್ಷಣೆ ಮಾಡಿ ಮೇಲಕ್ಕೆ ಕರೆದುಕೊಂಡು ಬಂದಾಗ ಅಖಿಲ್ ರಾಜ್ ಅವರು ಅವರ ಕಾಲು ಹಿಡಿದು ನಮಸ್ಕರಿಸಲು ಮುಂದಾದರು. ಕೊನೆಗೆ ಎಲ್ಲರ ಜತೆ ಫೋಟೊ ತೆಗೆಸಿಕೊಂಡರು. ಪ್ರಾಣ ರಕ್ಷಿಸಿದ್ದಕ್ಕೆ ಧನ್ಯವಾದ ಹೇಳಿದರು.
ಅಖಿಲ್ ರಾಜ್ ಅವರು ತೆಲುಗು ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಒಬ್ಬ ನಟನಾಗಿದ್ದು, ಉತ್ತಮ ಭವಿಷ್ಯ ಹೊಂದಿದ್ದಾರೆ.
ಇದನ್ನೂ ಓದಿ | Drowned | ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಯುವಕ ಕಾಲು ಜಾರಿ ನೀರುಪಾಲು