Site icon Vistara News

Temple Grant stopped : ದೇವಸ್ಥಾನಗಳಿಗೆ ಘೋಷಿಸಿದ್ದ ಅನುದಾನಗಳಿಗೆ ಸರ್ಕಾರ ತಡೆ; ಹಿಂದು ಸಂಘಟನೆಗಳ ಆಕ್ರೋಶ

Kukke subrahmanya temple

ಬೆಂಗಳೂರು: ಪಂಚ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಭಾರಿ ಕಸರತ್ತು ನಡೆಸುತ್ತಿರುವ ಸರ್ಕಾರ ಇದೀಗ ರಾಜ್ಯದ ದೇವಸ್ಥಾನಗಳ (Temples of Karnataka) ಜೀರ್ಣೋದ್ಧಾರಕ್ಕೆ ಘೋಷಿಸಲಾದ ಅನುದಾನವನ್ನು (Temple grant stopped) ತಡೆಹಿಡಿಯಲಾಗಿದೆ. ಇದು ಹಿಂದು ಸಂಘಟನೆಗಳ (Hindu Organizations) ಆಕ್ರೋಶಕ್ಕೆ ಕಾರಣವಾಗಿದೆ.

2022-23ನೇ ಸಾಲಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಿಡುಗಡೆಯಾದ ಅನುದಾನವನ್ನು ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ (Muzrai department Order) ಹೊರಡಿಸಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆಯನ್ನು ನೀಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಮೂರು ಅಂಶಗಳನ್ನು ಉಲ್ಲೇಖಿಸಲಾಗಿದೆ.

  1. ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ಸೂಚಿಸಿದೆ.
  2. ಶೇ‌.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ಅದನ್ನು ತಕ್ಷಣ ತಡೆ ಹಿಡಿದು ಅನುದಾನ ಬಿಡುಗಡೆ ಮಾಡದಂತೆ ಸೂಚನೆ ನೀಡಲಾಗಿದೆ.
  3. ಅನುದಾನದ ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯುವುದು
  4. ಹೀಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೂರು ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

ಹಿಂದು ಸಂಘಟನೆಗಳ ಆಕ್ರೋಶ

ದೇವಸ್ಥಾನಗಳ ಅನುದಾನ ಬಿಡುಗಡೆಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ದೇವಸ್ಥಾನಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆ, ಸಂಸ್ಕೃತಿಯನ್ನು ರೂಪಿಸುವಲ್ಲಿ ಅವುಗಳ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಇದನ್ನು ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿದ್ದು ಆಕ್ಷೇಪಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಜತೆಗೆ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿದೆ.

ಇದನ್ನೂ ಓದಿ: Free Bus Service : ಶಕ್ತಿ ಯೋಜನೆಯಿಂದ ದೇವರೂ ಶ್ರೀಮಂತರಾದರು; ಪುಣ್ಯಕ್ಷೇತ್ರಗಳಲ್ಲಿ ಹೆಚ್ಚಿದ ಆದಾಯ

ದೇವಸ್ಥಾನಗಳಲ್ಲಿ ಕಾಣಿಕೆ ಪ್ರಮಾಣ ಹೆಚ್ಚಳ

ರಾಜ್ಯದಲ್ಲಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದ ಹಲವಾರು ದೇವಾಲಯಗಳ ಆದಾಯ ಹೆಚ್ಚಾಗಿದೆ. 2022ರ ಜೂನ್​​​ 11ರಿಂದ ಜುಲೈ 15ರವರೆಗೆ 58 ದೇವಾಲಯಗಳಲ್ಲಿ ಇ-ಹುಂಡಿಗಳಲ್ಲಿ 19 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ ಇದೇ ಅವಧಿಯಲ್ಲಿ ಅದು 24 ಕೋಟಿ 47 ಲಕ್ಷ ರೂಪಾಯಿಗಳಿಗೇರಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 11.16 ಕೋಟಿ ರೂ. (ಕಳೆದ ವರ್ಷ 11.13 ಕೋಟಿ)
ಯಡಿಯೂರು ಸಿದ್ದಲಿಂಗೇಶ್ವರ ದೇಗುಲದಲ್ಲಿ 1.48 ಕೋಟಿ ರೂ. (ಕಳೆದ ವರ್ಷ 1.20 ಕೋಟಿ)
ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ 1.27 ಕೋಟಿ ರೂ. (ಕಳೆದ ವರ್ಷ 1.95 ಕೋಟಿ)
ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ 83.64 ಲಕ್ಷ ರೂ. (ಕಳೆದ ವರ್ಷ 65.82 ಲಕ್ಷ ರೂ.)
ಸಂಗ್ರಹವಾಗಿತ್ತು. ಹೀಗೆ ಎಲ್ಲ ದೇಗುಲಗಳಲ್ಲಿ ಹೆಚ್ಚಿನ ಆದಾಯ ಸಿಕ್ಕಿದೆ. ಅಷ್ಟಾದರೂ ಅದನ್ನು ದೇಗುಲಗಳಿಗೆ ವಾಪಸ್‌ ಕೊಡುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Exit mobile version