ಶಿವಮೊಗ್ಗ: ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗಕ್ಕೆ ಮೂರು ದಿನಗಳ ಹಿಂದೆ ಟೆಂಡರ್ ಕರೆಯಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಅವರು ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಸ್ವಾತಂತ್ರ್ಯ ಪೂರ್ವದಲ್ಲಿ ಆಗಿತ್ತು. ನಂತರದಲ್ಲಿ ಆಗಿರಲಿಲ್ಲ. ಹಾಗಾಗಿ ೨೦೧೦ರಲ್ಲಿ ತಾಳಗುಪ್ಪದ ತನಕದ ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಲಾಯಿತು. ಬೀರೂರಿನಿಂದ ಶಿವಮೊಗ್ಗ ತನಕದ ಮಾರ್ಗ ರೈಲ್ವೆ ಇಲಾಖೆ ದೃಷ್ಟಿಯಿಂದ ಬ್ರಾಂಚ್ ಲೈನ್ ಆಗಿದ್ದರೂ ಬಳಕೆ ಪ್ರಮಾಣ ದೊಡ್ಡದಿದೆ. ಇದನ್ನು ಮನಗಂಡು ಇದೀಗ ಶಿವಮೊಗ್ಗ ದಿಂದ ಶಿಕಾರಿಪುರ ತನಕದ ಮಾರ್ಗಕ್ಕೆ ಕಳೆದ ವಾರ ಟೆಂಡರ್ ಕರೆಯಲಾಗಿದೆ ಎಂದರು.
ಮೊದಲ ಹಂತದಲ್ಲಿ ೪೮ ಕಿ.ಮೀ.
ಮೊದಲ ಹಂತದಲ್ಲಿ 48 ಕಿಮೀ ಉದ್ದದ ಶಿವಮೊಗ್ಗ -ಶಿಕಾರಿಪುರ ಮಾರ್ಗ ನಿರ್ಮಾಣವಾಗಲಿದ್ದು, 30 ಹಳ್ಳಿಗಳ ಮೂಲಕ ರೈಲ್ವೆ ಮಾರ್ಗ ಹಾದು ಹೋಗಲಿದೆ. ಭೂಸ್ವಾಧೀನಕ್ಕೆ 130 ಕೋಟಿ ರೂ. ಖರ್ಚು ಆಗಿದ್ದು, 555 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಶೇ. 90ರಷ್ಟು ಮುಗಿದಿದೆ. ನವೆಂಬರ್ ತಿಂಗಳೊಳಗೆ ಟೆಂಡರ್ ಮುಗಿಯಲಿದೆ. 517 ಕೋಟಿ ರೂ. ವೆಚ್ಚದ ಕಾಮಗಾರಿ ಮುಗಿಸಲು 30 ತಿಂಗಳ ಅವಧಿ ಇರಲಿದೆ ಎಂದು ವಿವರಿಸಿದರು.
ಈಸೂರಿಗೆ 14ರಂದು ಕೇಂದ್ರ ಸಚಿವೆ
ದೇಶದ ಸ್ವಾತಂತ್ರ್ಯ ಹೋರಾಟದ ೪೦೦ ಸ್ಥಳಗಳನ್ನು ಗುರುತಿಸುವ ಕೇಂದ್ರ ಸರ್ಕಾರದ ಯೋಜನೆಯಡಿ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮವನ್ನು ಗುರುತಿಸಲಾಗಿದೆ. ಆಗಸ್ಟ್ ೧೪ರಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಈಸೂರಿಗೆ ಭೇಟಿ ನೀಡಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ. ಯುವ ಮೋರ್ಚಾ ವತಿಯಿಂದ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
ತುಮಕೂರಿನಿಂದ ಶಿವಮೊಗ್ಗ ತನಕದ ರಾಷ್ಟ್ರೀಯ ಹೆದ್ದಾರಿ, ಸಿಗಂದೂರು ಸೇತುವೆ ಹಾಗೂ ತೀರ್ಥಹಳ್ಳಿ ಭಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇದ್ದ ಅಡತಡೆ ನಿವಾರಿಸಲಾಗಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಮಾರ್ಗ ಅನುಷ್ಠಾನಗೊಳ್ಳಲಿದೆ. ತೀರ್ಥಹಳ್ಳಿಯ ಮೇಗರವಳ್ಳಿಯಿಂದ ಆಗುಂಬೆ ತನಕದ ರಾಷ್ಟ್ರೀಯ ಹೆದ್ದಾರಿ ದ್ವಿಪಥಗೊಳಿಸುವ ಕೆಲಸಕ್ಕೆ ಅನುಮೋದನೆ ಸಿಕ್ಕಿದೆ. 766ಸಿ ಗೆ ೩೫ ಕಿಮೀ ಬೈಪಾಸ್ ರಸ್ತೆಯನ್ನು ೩೫೦ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಶಿಕಾರಿಪುರ ಪಟ್ಟಣಕ್ಕೆ ಬೈಪಾಸ್ ರಸ್ತೆ, ರೈಲ್ವೆ ಓವರ್ ಮತ್ತು ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ತೇವರ ಚಟ್ನಳ್ಳಿಯಲ್ಲಿ ೧೦ ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿವಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹೊಸನಗರ ತಾಲೂಕಿನ ನಗರ ಕೋಟೆ, ಶಿಕಾರಿಪುರದ ಅಲ್ಲಮ ಪ್ರಭು ಜನ್ಮಸ್ಥಳ ಹಾಗೂ ಭದ್ರಾವತಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೊಡಚಾದ್ರಿಗೆ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ನೀಡಿದೆ ಎಂದರು.
ಮೆಕ್ಕೆಜೋಳ ಸಂಶೋಧನಾ ಕೇಂದ್ರ
ಮೆಕ್ಕೆಜೋಳ ಸಂಶೋಧನೆಗೆ ಪೂರಕವಾಗಿ ಐಐಎಂಆರ್ ಕೇಂದ್ರ ಸ್ಥಾಪನೆಗೆ ಕೇಂದ್ರದ ತಂಡ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ಜಿಲ್ಲೆಯ ೨೬೬ ಗ್ರಾಮ ಪಂಚಾಯಿತಿ ೧೮೭೬ ಹಳ್ಳಿ ನೆಟ್‌ವರ್ಕ್ ಆಗಿದೆ. ಉಳಿದ ೮೧ ಹಳ್ಳಿ ಹಾಗೂ ೬೪ ಹ್ಯಾಮ್ಲೆಟ್ ಗಳಿಗೆ ಸಂಪರ್ಕ ನೀಡಲು ಕ್ರಮ ವಹಿಸಲಾಗಿದೆ. ಯುಎಸ್ಒಎಫ್ ನಿಧಿ ಬಳಸಿಕೊಂಡು ಮೊಬೈಲ್ ಟವರ್ ನಿರ್ಮಾಣ ಮತ್ತು ಒಎಫ್‌ಸಿ ಅಳವಡಿಕೆಗೆ ನಿರ್ಧರಿಸಲಾಗಿದೆ. ಜಿಲ್ಲೆಯ 4670 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಮೆಕ್ಕೆಜೋಳ ಮಳೆಯಿಂದ ಹಾಳಾಗಿದೆ. ಇದಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಪಕ್ಷದ ಮುಖಂಡರು ಇದ್ದರು.
ಇದನ್ನೂ ಓದಿ | Name Secret | ರಾಘವೇಂದ್ರ, ವಿಜಯೇಂದ್ರ ಹೆಸರಿನ ಗುಟ್ಟನ್ನು ಬಿಟ್ಟುಕೊಟ್ಟ ಬಿ.ಎಸ್.ಯಡಿಯೂರಪ್ಪ!