Site icon Vistara News

Shimogga tense | ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದ ಗೃಹ ಸಚಿವ ಜ್ಞಾನೇಂದ್ರ

Shimogga tense

ಶಿವಮೊಗ್ಗ: ದುಷ್ಕರ್ಮಿಗಳ ಚೂರಿ ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಕುಮಾರ್‌ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ವೈದ್ಯಾಧಿಕಾರಿಗಳಿಂದ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಘರ್ಷಣೆ ಆರಂಭವಾಗುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ಗೃಹ ಸಚಿವರು ನಗರಕ್ಕೆ ಆಗಮಿಸಿದ್ದು, ಹಿರಿಯ ಅಧಿಕಾರಿಗಳಿಂದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಫ್ಲೆಕ್ಸ್‌ ಅಳವಡಿಕೆ ವಿಷಯದಲ್ಲಿ ಈ ಗಲಾಟೆ ನಡೆದಿದ್ದು, ಈ ಕುರಿತೂ ತನಿಖೆ ನಡೆಸಲಾಗುತ್ತದೆ. ಚಾಕುವಿನಿಂದ ಇರಿದ ಆರೋಪಿಗಳ ಬಂಧನಕ್ಕೂ ಕ್ರಮ ತೆಗೆದುಕೊಂಡಿದ್ದೇವೆ. ಈ ಘಟನೆಯಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಹೆಚ್ಚುವರಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದ್ದು, ಎಡಿಜಿಪಿ ಅಲೋಕ್ ಕುಮಾರ್ ಕೂಡ ಆಗಮಿಸಲಿದ್ದಾರೆ ಎಂದು ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಘಟನೆಯ ಹಿಂದೆ ಇರಬಹುದಾದ ಮತಾಂಧ ಶಕ್ತಿಗಳನ್ನು ಬಯಲು ಮಾಡಬೇಕಿದೆ ಎಂದು ಹೇಳಿದ ಸಚಿವರು, ಇತ್ತೀಚೆಗೆ ಎಸ್‌ಡಿಪಿಐ ಕಾರ್ಯಕರ್ತ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲಘುವಾಗಿ ಮಾತನಾಡಿದ್ದಾರೆ. ಇದು ಅದರ ಮುಂದುವರಿದ ಭಾಗವೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.

ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯು ನಗರಾದ್ಯಂತ ಅಳವಡಿಸಿರುವ ಎಲ್ಲ ಫ್ಲೆಕ್ಸ್‌ ಗಳನ್ನು ತೆರವುಗೊಳಿಸಿದೆ.

ಮನೆಗೆ ಹೋಗುವಾಗ ದಾಳಿ
ಈ ನಡುವೆ ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಸರವಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. “ನಗರದಲ್ಲಿ ಗಲಾಟೆ ಆರಂಭಗೊಂಡಿದ್ದರಿಂದ ಮೂರು ಗಂಟೆಗೆ ಅಂಗಡಿ ಕ್ಲೋಸ್ ಮಾಡಿದ್ದೆವು.  ಅಂಗಡಿ ಕ್ಲೋಸ್ ಮಾಡಿ ಮನೆಗೆ ಹೋಗುವಾಗ ಎಂಟು ಹತ್ತು‌ಜನರ ತಂಡ ನಮ್ಮ ಮೇಲೆ ದಾಳಿ ಮಾಡಿತು. ಮೊದಲು ನನ್ನ ಮೇಲೆ ಹಲ್ಲೆ ನಡೆಸಲಾರಂಭಿಸಿದರು. ಆಗ ನಾನು ಅವರಿಂದ ತಪ್ಪಿಸಿಕೊಂಡು ಬಜಾರ್ ಕಡೆ ಓಡಿ ಹೋದೆ. ಬಳಿಕ ನನ್ನ ಹಿಂದೆ‌ ಬರುತಿದ್ದ ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದರು. ನಾನು‌ ನೋಡನೋಡುತಿದ್ದಂತೆಯೇ ಪ್ರೇಮ್‌ ಸಿಂಗ್ ಗೆ ಚಾಕುವಿನಿಂದ ಇರಿದರುʼʼ ಎಂದು ಸರವಣ ಹೇಳಿದ್ದಾರೆ.

“ಕೂಡಲೇ ನಾನು ಅಂಗಡಿ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಕೂಡಲೇ ಸ್ಥಳಕ್ಕೆ  ಆಗಮಿಸಿ ಪ್ರೇಮ್ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಿದರುʼʼ ಎಂದು ಸರವಣ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ| Shimogga tense | ಉಸ್ತುವಾರಿ ಸಚಿವರ ಸಭೆ, ನಾಳೆ ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ಶಾಲೆಗೆ ರಜೆಗೆ ಸೂಚನೆ

Exit mobile version