ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಳಿಯ ಮೂಡು ಕೊಣಾಜೆಯಲ್ಲಿ ವಿಶಿಷ್ಟವಾದ 8 ಪ್ರಾಚೀನ ಟೆರಾಕೋಟಾ ಪುಟ್ಟ ಬೊಂಬೆಗಳು (Terracotta Figurines) ಕಂಡುಬಂದಿವೆ. ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಇದು ಲಭ್ಯವಾಗಿದ್ದು, ಕುತೂಹಲ ಮೂಡಿಸಿದೆ.
ಮೂಳೆ ಮತ್ತು ಕಬ್ಬಿಣದೊಂದಿಗೆ ವಿವಿಧ ಹಂತಗಳಲ್ಲಿ ಸಂರಕ್ಷಣೆ ಮಾಡಿ ಇಡಲಾಗಿದ್ದ ಈ ಪ್ರಾಚೀನ ಟೆರಾಕೋಟಾ ಪುಟ್ಟ ಬೊಂಬೆಗಳು (ಪುಟ್ಟ ಪ್ರತಿಮೆ) ಸದ್ಯ ಗಮನ ಸೆಳೆಯುತ್ತಿದೆ. ಈ ಪ್ರತಿಮೆಗಳು ಕ್ರಿ.ಪೂ 800-700 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಅನ್ವೇಷಣೆಯಲ್ಲಿ ಭಾಗಿಯಾಗಿದ್ದ ಉಡುಪಿ ಜಿಲ್ಲೆಯ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಟಿ.ಮುರುಗೇಶಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಟ್ಟ ಬೊಂಬೆಗಳಲ್ಲಿವೆ ಗೋವು, ದೇವತೆಯ ಚಿತ್ರ!
ಪತ್ತೆಯಾದ ಒಟ್ಟು ಎಂಟು ಪ್ರತಿಮೆಗಳಲ್ಲಿ ಎರಡು ಗೋವುಗಳು, ಒಂದು ದೇವತೆ, ಎರಡು ನವಿಲು, ಒಂದು ಕುದುರೆ, ಮಾತೆಯ ಕೈ ಮತ್ತು ಅಪರಿಚಿತ ವಸ್ತುಗಳ ಚಿತ್ರಣ ಕಂಡುಬಂದಿವೆ. ಮೂಡು ಕೊಣಾಜೆಯಲ್ಲಿರುವ ಈ ಶಿಲಾಯುಗದ ಅವಶೇಷ ಹೊಂದಿರುವ ಪ್ರದೇಶವನ್ನು ಇತಿಹಾಸಕಾರ ಮತ್ತು ಸಂಶೋಧಕ ಪುಂಡಿಕೈ ಗಣಪಯ್ಯ ಭಟ್ ಅವರು 1980ರ ದಶಕದಲ್ಲಿ ಕಂಡುಹಿಡಿದು ವರದಿ ಮಾಡಿದ್ದರು ಎಂದು ಟಿ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಲಾಯುಗ ಪತ್ತೆಯಾದ ಪ್ರದೇಶ ಎಲ್ಲಿದೆ?
ಈ ಸ್ಥಳವು ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಮೂಡುಬಿದಿರೆ-ಶಿರ್ತಾಡಿ ರಸ್ತೆಯಲ್ಲಿದೆ. ಇದು ಕಲ್ಲಿನ ಬೆಟ್ಟದ ಇಳಿಜಾರಿನಲ್ಲಿ ಒಂಬತ್ತು ಕಲ್ಲು ಹಾಸುಗಳು (ಡಾಲ್ಮೆನ್) ಕಂಡುಬಂದಿವೆ. ಇದರಲ್ಲಿ ಎರಡು ಕಲ್ಲು ಹಾಸುಗಳು ಉತ್ತಮ ಸ್ಥಿತಿಯಲ್ಲಿದ್ದು, ಉಳಿದವು ನಾಶವಾಗಿವೆ. ಈ ಬೃಹತ್ ಶಿಲಾ ಸಂಸ್ಕೃತಿಯನ್ನು ಭಾರತದಲ್ಲಿ ವಿವಿಧ ರೀತಿಯ ಸಮಾಧಿಗಳು ಎಂದು ಕರೆಯಲಾಗುತ್ತದೆ.
ಇದರಲ್ಲಿ ಕಲ್ಲು ಹಾಸು ಸಹ ಒಂದು. ಈ ಕಲ್ಲುಹಾಸಿನ ಅಡಿಯಲ್ಲಿ ಆರ್ಥೊಸ್ಟೇಟ್ ಎಂದು ಕರೆಯಲ್ಪಡುವ ದೊಡ್ಡ ಕಲ್ಲಿನ ಚಪ್ಪಡಿಗಳನ್ನು ಗಡಿಯಾರದ ಕ್ರಮದಲ್ಲಿ ಇಡಲಾಗಿದೆ. ಇಲ್ಲಿ ಚೌಕಾಕಾರದ ಕೋಣೆಯನ್ನು ನಿರ್ಮಿಸಲಾಗಿದೆ. ಇದನ್ನು ಕ್ಯಾಪ್ ಸ್ಟೋನ್ ಎಂಬ ದೊಡ್ಡ ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿದೆ. ಹೀಗಾಗಿ ಇದು ಭಾರತದಲ್ಲಿನ ಅಪರೂಪದ ಆವಿಷ್ಕಾರಗಳಲ್ಲಿ ಒಂದು ಎಂದು ಹೇಳಲಾಗಿದೆ.
ಭೂತಾರಾಧನೆ ಅಧ್ಯಯನಕ್ಕೆ ಪುಷ್ಟಿ
ಇಲ್ಲಿ ಕಂಡುಬಂದಿರುವ ಶಿಲಾ ಚಪ್ಪಡಿಗಳಲ್ಲಿ ಕೆಲವನ್ನು ನಿಧಿ ಆಸೆಗಾಗಿ ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಈ ಶಿಲಾ ಚಪ್ಪಡಿಗಳಲ್ಲಿ ಕಂಡುಬಂದಿರುವ ಟೆರಾಕೋಟಾ ಪುಟ್ಟ ಪ್ರತಿಮೆಗಳಲ್ಲಿ ಇರುವ ಗೋವಿನ ಚಿತ್ರವು ಅವುಗಳ ಕಾಲಮಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಈ ಟೆರಾಕೋಟಾಗಳು ಕರಾವಳಿ ಕರ್ನಾಟಕದ ಭೂತ ಆರಾಧನೆ ಅಥವಾ ದೈವಾರಾಧನೆಯ ಅಧ್ಯಯನಕ್ಕೆ ಪುಷ್ಟಿ ನೀಡುತ್ತದೆ.
ಇದನ್ನೂ ಓದಿ: Ganesha Chaturthi 2023 : ಗಣೇಶ ಚತುರ್ಥಿ ಸೆ.18ಕ್ಕೋ 19ಕ್ಕೋ?; ವಿದ್ವಾಂಸರು ಹೇಳೋದೇನು?
ಕೇರಳದಲ್ಲಿ ಪತ್ತೆಯಾದ ಟೆರಾಕೋಟಾ ಪ್ರತಿಮೆಯ ಹೋಲಿಕೆ
ಕೇರಳದ ಮಲಂಪುಳ ಬೆಟ್ಟದಲ್ಲಿ ಹಾಗೂ ಈಜಿಪ್ಟ್‌ನಲ್ಲಿ ಪತ್ತೆಯಾಗಿರುವ ಬೃಹತ್ ಶಿಲಾ ಟೆರಾಕೋಟಾ ಪ್ರತಿಮೆಗಳಲ್ಲಿಯೂ ಗೋವಿನ ಅಥವಾ ಹಸುವಿನ ದೇವತೆಯ ಚಿತ್ರಣ ಇದ್ದು, ಇದೂ ಸಹ ಅದರ ಹೋಲಿಕೆಯನ್ನು ಹೊಂದಿದೆ ಎಂದು ಪುರಾತತ್ವ ತಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.