ಬೆಂಗಳೂರು : ಬೆಂಗಳೂರು ಪೊಲೀಸರು ತೆರಳುತ್ತಿದ್ದ ವಾಹನ ಆಂಧ್ರ ಪ್ರದೇಶದ ಚಿತ್ತೂರು ಬಳಿ ಅಪಘಾತಕ್ಕೆ ಒಳಗಾಗಿ ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಪೊಲೀಸ್ ಕಾನ್‌ಸ್ಟೇಬಲ್ ಅನಿಲ್ ಮತ್ತು ಖಾಸಗಿ ಕಾರಿನ ಚಾಲಕ ಜೋಸೆಫ್ ಎಂಬುವರು ಮೃತಪಟ್ಟಿದ್ದಾರೆ.
ಬದುಕಿನ ಪಯಣ ಮುಗಿಸಿದ ಸಬ್‌ಇನ್‌ಸ್ಪೆಕ್ಟರ್ ಅವಿನಾಶ್
2016 ರಲ್ಲಿ ವೃತ್ತಿ ಜೀವನಕ್ಕೆ ಮೊದಲ ಹೆಜ್ಜೆ ಇರಿಸಿದ್ದರು ಸಬ್ ಇನ್‌ಸ್ಟೆಕ್ಟರ್ ಅವಿನಾಶ್ . ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ವೃತ್ತಿ ಆರಂಭಿಸಿದ ನಂತರ ಶಿವಾಜಿನಗರ ಪೊಲೀಸ್ ಠಾಣೆಗೆ ವರ್ಗವಾದ್ದರು. ಕೆಲಸ ಆರಂಭಿಸಿ 6 ವರ್ಷಗಳಷ್ಟೆ ಆಗಿತ್ತು. ಜುಲೈ 23ರಂದು ಅವಿನಾಶ್ ಅವರು ತಂಡದೊಂದಿಗೆ ಪ್ರಕರಣವೊಂದರ ಜಾಡು ಹಿಡಿದು ಚಿತ್ತೂರಿಗೆ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 5 ಗಂಟೆಯ ವೇಳೇಗೆ ಪೊಲೀಸರು ಪ್ರಯಾಣ ಬೆಳೆಸಿದ್ದ ಕಾರು ಚಿತ್ತೂರಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಅಪ್ಪಳಿಸಿತ್ತು. ಅವಿನಾಶ್. ಅನಿಲ್, ಕಾರು ಚಾಲಕ ಜೋಸೆಫ್ ಸ್ಥಳದಲ್ಲೆ ಮೃತಪಟ್ಟಿದ್ದರೆ, ಇನ್ನಿಬ್ಬರು ಗಂಭಿರವಾಗಿ ಗಾಯಗೊಂಡಿದ್ದರು.
ಹುಟ್ಟು ಹಬ್ಬದ ನೆನಪು ಬಿಟ್ಟು ಮರೆಯಾದ ಅನಿಲ್..!
ಅನಿಲ್ ಮೂಲತಃ ಬಾಗಲಕೋಟೆಯ ಜಮುಖಂಡಿಯವರು.ಕಳೆದ 2 ವರ್ಷ ಹಿಂದೆಯಷ್ಟೆ ಪೊಲೀಸ್ ಇಲಾಖೆಯಲ್ಲಿ ಪೇದೆ ಕೆಲಸಕ್ಕೆ ನೇಮಕಗೊಂಡಿದ್ದರು. ಮೊದಲ ಪೋಸ್ಟಿಂಗ್ ಶಿವಾಜಿನಗರ ಠಾಣೆಗೆ ಆಗಿತ್ತು. ಚಿಕ್ಕದಿನಿಂದಲೂ ಒಳ್ಳೆ ಕೆಲಸಕ್ಕೆ ಮಾಡ್ಬೇಕು. ಅಪ್ಪನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡು ಬದುಕುತ್ತಿದ್ದ ಮೃದು ಸ್ವಭಾವದವರು ಅನಿಲ್. ಅವರ ತಂದೆ ಕೂಲಿ ಕೆಲಸ ಮಾಡಿ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದರು. ಅಂತೆಯೇ ತಂದೆಗೆ ತಕ್ಕ ಮಗನಾಗಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ | ಗಾಂಜಾ ಆರೋಪಿಯ ಹಿಡಿಯಲು ಹೋಗಿದ್ದ ಬೆಂಗಳೂರಿನ ಇಬ್ಬರು ಪೊಲೀಸರು ಅಪಘಾತಕ್ಕೆ ಬಲಿ
ಕೆಲಸಕ್ಕೆ ಸೇರುತ್ತಿದ್ದಂತೆ ಮನೆಯ ಜವಾಬ್ದಾರಿ ಹೆಗಲಿಗೆ ಹಾಕಿಕೊಂಡ ಅನಿಲ್ ತಂದೆಯನ್ನು ಕೂಲಿ ಕೆಲಸದಿಂದ ಬಿಡಿಸಿ ಮನೆಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಕಳೆದ ತಿಂಗಳಷ್ಟೇ ಮನೆ ಹೋಗಿ ಮಾತಾಡಿಸಿಕೊಂಡು ಬಂದವರು 4 ದಿನಗಳ ಹಿಂದೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.
ಸದಾ ಚುರುಕಿನಿಂದ ಕೂಡಿದ ಇಬ್ಬರು ಇಲಾಖೆ ಸಿಬ್ಬಂದಿಗಳ ಅಚಾನಕ್ ಸಾವು ಇಲಾಖೆಗೂ ತುಂಬಲಾರದಷ್ಟು ನಷ್ಟವನ್ನು ಉಂಟು ಮಾಡಿದೆ. ಅಪಘಾತದ ಕುರಿತಂತೆ ಸಿಎಂ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಟ್ವೀಟ್ ಮಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ | ಮೃತ ಕಾನ್ಸ್‌ಟೇಬಲ್ ಅನಿಲ್ ಮುಳಿಕ್ ಕುಟುಂಬದ ಆಕ್ರಂದನ: ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂತಾಪ