Site icon Vistara News

ಗಾಂಜಾ ಆರೋಪಿಯ ಹಿಡಿಯಲು ಹೋಗಿದ್ದ ಬೆಂಗಳೂರಿನ ಇಬ್ಬರು ಪೊಲೀಸರು ಅಪಘಾತಕ್ಕೆ ಬಲಿ

ಪೊಲೀಸರು ಸಾವು

ಬೆಂಗಳೂರು: ಬೆಂಗಳೂರು ಪೊಲೀಸರು ತೆರಳುತ್ತಿದ್ದ ವಾಹನ ಆಂಧ್ರದ ಚಿತ್ತೂರು ಬಳಿ ಅಪಘಾತಕ್ಕೆ ಒಳಗಾಗಿ ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಪೊಲೀಸ್‌ ಕಾನ್‌ಸ್ಟೇಬಲ್‌ ಅನಿಲ್‌ ಮತ್ತು ಖಾಸಗಿ ಕಾರಿನ ಚಾಲಕ ಜೋಸೆಫ್ ಮೃತಪಟ್ಟಿದ್ದಾರೆ.

ಗಾಂಜಾ ಪ್ರಕರಣದ ಸಂಬಂಧ ಬೆಂಗಳೂರು ಪೊಲೀಸರ ತಂಡ ಚಿತ್ತೂರಿಗೆ ತೆರಳಿತ್ತು ಎನ್ನಲಾಗಿದೆ. ಚಿತ್ತೂರು ಬಳಿ ಆರೋಪಿ ಇರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆರೋಪಿ ಚಿತ್ತೂರಿನಲ್ಲಿ ಸಿಗದ ಹಿನ್ನೆಲೆಯಲ್ಲಿ ಬೇರೆಡೆ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಚಿತ್ತೂರಿನಿಂದ ತಿರುಪತಿಗೆ ಹೋಗುವ ಮಾರ್ಗದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಟ್ರಾವೆಲ್ ಸಂಸ್ಥೆಯೊಂದರಿಂದ ಇನೋವಾ ಕಾರು ಬಾಡಿಗೆ ಪಡೆದು ಶನಿವಾರ(ಜು.23) ರಾತ್ರಿ ಪೊಲೀಸರ ತಂಡ ತೆರಳಿತ್ತು. ಎರಡು ವಾಹನದಲ್ಲಿ ಎಂಟು ಸಿಬ್ಬಂದಿ ತೆರಳಿದ್ದರು ಎನ್ನಲಾಗಿದೆ. ಒಂದು ವಾಹನದಲ್ಲಿ ನಾಲ್ವರು ಮುಂದೆ ತೆರಳಿದ್ದರು. ಆಕ್ಸಿಡೆಂಟ್ ಆದ ಇನೋವಾ ಕಾರಿನಲ್ಲಿ ನಾಲ್ವರು ಸಿಬ್ಬಂದಿ ತೆರಳಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ.

ಮತ್ತೊಂದು ಕಾರಿಗೂ ಅಪಘಾತ

ಮುಂದೆ ಹೋಗುತ್ತಿದ್ದ ಮತ್ತೊಂದು ತಂಡಕ್ಕೆ ಘಟನೆ ಬಳಿಕ ಮಾಹಿತಿ ರವಾನೆ ಮಾಡಲಾಯಿತು. ಕೂಡಲೇ ವಾಪಸ್ ಬರುವ ವೇಳೆ ಆ ಕಾರಿನ ಬ್ರೇಕ್ ಫೇಲ್ ಆಗಿ ಅಪಘಾತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಸಿಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಪೊಲೀಸರ ಬಳಿ ಮಾತನಾಡಿದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದಾರೆ.

ಇದನ್ನೂ ಓದಿ | ಕೊಲ್ಲಾಪುರ ಬಳಿ ಭೀಕರ ಅಪಘಾತ, ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಮೃತ್ಯು

ಅಪಘಾತದಲ್ಲಿ ತಾಲೂಕಿನ ಆರಕೂಡು ಗ್ರಾಮ, ಬಸವಕಲ್ಯಾಣದ ಶಿವಾಜಿನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ (29), ಬಾಗಲಕೋಟೆ ಜಮಖಂಡಿ ತಾಲೂಕಿನ ಚಿಕ್ಕಳಕೆರೆ ಗ್ರಾಮದ ಶಿವಾಜಿನಗರ ಠಾಣೆ ಕಾನ್ಸ್‌ಟೇಬಲ್ ಅನಿಲ್ ಮುಲಿಕ್ (26), ಮತ್ತು ಕಾರು ಚಾಲಕ ಜೋಸೇಫ್‌ ಮೃತಪಟ್ಟಿದ್ದಾರೆ. ಶಿವಾಜಿನಗರ ಠಾಣೆಯ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್ ಮತ್ತು ಅಮೃತಹಳ್ಳಿ ಲೇಔಟ್‌ನ ಮುನಿಸ್ವಾಮಪ್ಪ, ಶಿವಾಜಿನಗರ ಠಾಣೆ ಕಾನ್ಸ್‌ಟೇಬಲ್ ಶರಣಬಸವ ಗಾಯಾಳುಗಳಾಗಿದ್ದಾರೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಇದನ್ನೂ ಓದಿ | ಬೆಂಗಳೂರಿನ ಹೆಬ್ಬಾಳ ಬಳಿ ಸರಣಿ ಅಪಘಾತ, ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕರು

Exit mobile version