Site icon Vistara News

Terrorist arrested : ಶಂಕಿತ ಉಗ್ರ ಆರಿಫ್‌ ಫ್ಯಾಮಿಲಿ ಕಥೆಯೇ ರೋಚಕ, ಇವನಿಗ್ಯಾಕೆ ಹುಟ್ಟಿತು ಧರ್ಮದ ಹುಚ್ಚು?

Terrorist arrested in Bangalore

#image_title

ಬೆಂಗಳೂರು: ಥಣಿಸಂದ್ರದ ಮಂಜುನಾಥ ನಗರದಲ್ಲಿರುವ ಮನೆಯಿಂದ ಶನಿವಾರ ಬಂಧಿತನಾದ ಉತ್ತರ ಪ್ರದೇಶ ಮೂಲದ ಉಗ್ರ ಮೊಹಮ್ಮದ್‌ ಆರಿಫ್‌ ಅಲಿಯಾಸ್‌ ಆರಿಫ್‌ ಸ್ವತಃ ಒಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌. ಮಾತ್ರವಲ್ಲ ಅವರ ಇಡೀ ಕುಟುಂಬವೇ ಸುಶಿಕ್ಷಿತವಾಗಿದೆ. ಆದರೂ ಈ ಆರಿಫ್‌ ಯಾಕೆ ಧರ್ಮದ ಹುಚ್ಚು ಹತ್ತಿಸಿಕೊಂಡ ಎನ್ನುವುದು ನಿಗೂಢವಾದ ಪ್ರಶ್ನೆ.

ಆರಿಫ್‌ನ ತಂದೆ, ತಾಯಿ, ಅಣ್ಣ, ತಮ್ಮ ಎಲ್ಲರೂ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆರಿಫ್‌ ಕೂಡಾ ಎರಡು ವರ್ಷದ ಹಿಂದಿನವರೆಗೆ ಅಲ್ಲೇ ಇದ್ದವನು. ಒಂದೂವರೆ ವರ್ಷದ ಹಿಂದಿನವರೆಗೆ ಆತನ ಹೆಂಡತಿ ಮತ್ತು ಮಕ್ಕಳು ಕೂಡಾ ಅಲ್ಲೇ ಇದ್ದರು. ಈಗ ಎರಡು ವರ್ಷದಿಂದ ಬೆಂಗಳೂರಿನಲ್ಲಿರುವ ಆರಿಫ್‌ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾನೆ. ತಿಂಗಳಿಗೆ ೧.೫ ಲಕ್ಷ ರೂ. ಸಂಬಳ ಪಡೆಯುತ್ತಿದ್ದ.

ಆರಿಫ್‌ನ ಕುಟುಂಬದ ಸದಸ್ಯರೆಲ್ಲರೂ ಒಳ್ಳೆಯ ಹುದ್ದೆಗಳಲ್ಲಿದ್ದು ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಆರಿಫ್‌ನ ತಂದೆ ಡಾಕ್ಟರ್, ಅಣ್ಣ ಚಾರ್ಟರ್ಡ್‌ ಅಕೌಂಟೆಂಟ್ ಹಾಗೂ ತಮ್ಮ ಆರ್ಕಿಟೆಕ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ಇಂಥ ಕುಟುಂಬದಿಂದ ಬಂದ ಆರಿಫ್‌ಗೆ ಮಾತ್ರ ಧರ್ಮದ ಹುಚ್ಚು ಹಿಡಿದಿದೆ.

ಮನೆಯವರಿಗೆ ಗೊತ್ತಿರಲಿಲ್ಲ?

ಆರಿಫ್‌ಗೆ ಯಾವಾಗ ಈ ಧರ್ಮದ ಹುಚ್ಚು ಹಿಡಿಯಿತು? ಉಗ್ರ ಸಂಘಟನೆಯತ್ತ ಆಸಕ್ತಿ ಮೂಡಿದ್ದೇಕೆ ಎನ್ನುವ ಪ್ರಶ್ನೆಗೆ ಪೊಲೀಸ್‌ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ಆದರೆ, ಆತನ ಸಂಪರ್ಕಗಳ ಬಗ್ಗೆ ಮನೆಯವರಿಗೆ ಅರಿವು ಇರಲಿಲ್ಲ ಎನ್ನಲಾಗಿದೆ. ಆತನ ಪತ್ನಿಗೂ ಈತನ ಕಥೆ ತಿಳಿದಿರಲಿಲ್ಲ.

ಥಣಿಸಂದ್ರದಲ್ಲಿ ವಾಸವಾಗಿದ್ದ ಈತ ಟ್ವಿಟರ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತಾಲಿಬಾನ್ ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಿರುವುದು ಗುಪ್ತಚರ ಇಲಾಖೆಗಳ ಗಮನಕ್ಕೆ ಬಂದಿತ್ತು. ಆಗಿನಿಂದಲೇ ಐಬಿ ಮತ್ತು ಐಎಸ್‌ಡಿ ಆತನ ಮೇಲೆ ಕಣ್ಣಿಟ್ಟಿತ್ತು.

ಈತ ಅಪ್ಲೋಡ್‌ ಮಾಡಿದ ಕೆಲವು ವಿಡಿಯೊಗಳನ್ನು ಟ್ವಿಟರ್‌ ಸಂಸ್ಥೆಯೇ ಡಿಲಿಟ್‌ ಮಾಡಿತ್ತು. ಆವತ್ತಿನಿಂದಲೇ ಆತನ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯನಾಗಿದ್ದ, ಆರೀಫ್ ಅದೇ ಗುಂಗಿನಲ್ಲಿದ್ದ. ಯಾರು ಧರ್ಮದ ಪರವಾಗಿ ಹೆಚ್ಚು ಪೋಸ್ಟ್ ಗಳನ್ನು ಹಾಕ್ತಾರೋ ಅವರನ್ನು ಗುರುತಿಸಿ ಲಿಸ್ಟ್‌ ಮಾಡಿಕೊಳ್ಳುತ್ತಿದ್ದ.

ಮೂರ್ನಾಲ್ಕು ತಿಂಗಳ ಕಾಲ ಅವರನ್ನು ನಡೆಗಳನ್ನು ಅವಲೋಕಿಸಿ ತಾನೇ ಪ್ರಚೋದನೆ ಕೊಟ್ಟು ತನ್ನತ್ತ ಸೆಳೆಯುತ್ತಿದ್ದ. ಅವರನ್ನು ಟೆಲಿಗ್ರಾಂ ಗ್ರೂಪ್‌ ಗೆ ಸೇರಿಸಿಕೊಳ್ಳುತ್ತಿದ್ದ.

ಮಾರುವೇಷದಲ್ಲಿ ಮಾಹಿತಿ ಸಂಗ್ರಹ

ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ಕೆಲವು ಸಮಯದಿಂದ ಆತನ ಮೇಲೆ ಕಣ್ಣಿಟ್ಟಿದ್ದಲ್ಲದೆ ಒಮ್ಮೆ ಆ ಕಟ್ಟಡದ ಒಳಗೂ ಹೋಗಿಬಂದಿದ್ದರು. ಆರಿಫ್‌ ವಾಸವಿದ್ದ ಮನೆಯ ರೀತಿಯಲ್ಲೇ ಅದೇ ಕಟ್ಟಡದಲ್ಲಿ ಬೇರೊಂದು ಮನೆ ಬಾಡಿಗೆಗೆ ಇತ್ತು. ಅದರ ಗ್ರಾಹಕರಂತೆ ಅಧಿಕಾರಿಗಳು ಆ ಕಟ್ಟಡವನ್ನು ಹೊಕ್ಕಿದ್ದರು. ಇಬ್ಬರು ಅಧಿಕಾರಿಗಳು ಮನೆಗೆ ಹೋಗಿ ಹಣ್ಣು ಮಾರಾಟ ಮಾಡುವ ವ್ಯಕ್ತಿ ಬಾಡಿಗೆ ಮನೆ ಬೇಕೆಂದು ಮಾಲೀಕನನ್ನು ಕೇಳಿದರು. ಆಗ ಅವರು ಒಳ್ಳೆಯ ಹುದ್ದೆಯಲ್ಲಿರುವವರಿಗೆ ಮಾತ್ರ ಕೊಡುವುದಾಗಿ ಹೇಳಿದರು.

ಈ ನಡುವೆ, ಕಳೆದ ಒಂದು ತಿಂಗಳಿನಿಂದ ಮನೆ ಬಳಿಯೇ ಅಪರಿಚಿತರಂತೆ ಓಡಾಡುತ್ತಿದ್ದ ಗುಪ್ತಚರ ಸಿಬ್ಬಂದಿಗೆ ಆರಿಫ್‌ ಮನೆ ಖಾಲಿ ಮಾಡುವ ವಿಚಾರ ತಿಳಿಯಿತು. ಆ ಬಳಿಕ ಹೆಚ್ಚು ತಡ ಮಾಡದೆ ದಾಳಿ ನಡೆಸಲಾಯಿತು.

ಇದನ್ನೂ ಓದಿ : Terrorist arrested in Bangalore: ಉಗ್ರ ಬಂಧನ: ʼಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ನಾಯಕನಂಥ ಎಡವಟ್ಟಿನಿಂದ ಸಿಕ್ಕಿಬಿದ್ದ ಉಗ್ರ!

Exit mobile version