Site icon Vistara News

ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ; ಕನ್ನಡ ಸೇರಿ 15 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ, ಯಾವ ಹುದ್ದೆಗೆ ಅನ್ವಯ?

Government Job Tests In Regional Languages

Test for Central Government jobs in 15 languages Including Kannada

ನವದೆಹಲಿ: ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಕನ್ನಡಿರಿಗೆ ಸಿಹಿ ಸುದ್ದಿ ನೀಡಿದೆ. “ಯುವಕರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ಪರೀಕ್ಷೆಗಳನ್ನು ಕನ್ನಡ (Kannada) ಸೇರಿ 15 ಭಾಷೆಗಳಲ್ಲಿ ನಡೆಸಲು ಇತ್ತೀಚೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ” ಎಂದು ಕೇಂದ್ರ ಸಿಬ್ಬಂದಿ, ಕುಂದುಕೊರತೆಗಳು ಹಾಗೂ ಪಿಂಚಣಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿಗಳ ಸಚಿವಾಲಯದ 14ನೇ ಹಿಂದಿ ಕನ್ಸಲ್ಟೇಟಿವ್‌ ಸಮಿತಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. “ಇಂಗ್ಲಿಷ್‌, ಹಿಂದಿ ಜತೆಗೆ 15 ಭಾಷೆಗಳಲ್ಲಿ ಎಸ್‌ಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಕುರಿತು ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಯುವಕರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.

15 ಭಾಷೆಗಳು ಯಾವವು?

ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಇದುವರೆಗೆ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲಾಗುತ್ತಿತ್ತು. ಈಗ ಇಂಗ್ಲಿಷ್‌, ಹಿಂದಿ ಜತೆಗೆ ಕನ್ನಡ, ಅಸ್ಸಾಮೀಸ್‌, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಹಾಗೂ ಕೊಂಕಣಿ ಭಾಷೆಗಳಲ್ಲಿ ಇನ್ನು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಇದರೊಂದಿಗೆ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಬರೆದು ಕೇಂದ್ರ ಸರ್ಕಾರದ ಉದ್ಯೋಗ ಪಡೆಯಬಹುದಾಗಿದೆ.

ಇದನ್ನೂ ಓದಿ: DA Hike 2023: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ; ಹೆಚ್ಚಾಗಲಿದೆ ಇಷ್ಟು ತುಟ್ಟಿ ಭತ್ಯೆ

ಸಿಎಪಿಎಫ್‌ ಪರೀಕ್ಷೆಯೂ ಕನ್ನಡದಲ್ಲೇ ಬರೆಯಬಹುದು

ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯ ನೇಮಕಾತಿ ಪರೀಕ್ಷೆಯನ್ನೂ ಕನ್ನಡ ಸೇರಿ 15 ಭಾಷೆಯಲ್ಲಿ ಬರೆಯುವ ಕುರಿತು ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸಿಎಪಿಎಫ್‌ ವ್ಯಾಪ್ತಿಗೆ ಬರುವ ಸಿಆರ್‌ಪಿಎಫ್‌, ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ದಳ, ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ITBP) ಸೇರಿ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಬಹುದಾಗಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೂ ಅನುಕೂಲವಾಗಲಿದೆ.

Exit mobile version