ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET Eaxm 2022) ಭಾನುವಾರ ನಡೆದಿದ್ದು, ಆನ್‌ಲೈನ್ ತಂದ ಎಡವಟ್ಟಿಗೆ ಟಿಇಟಿ ಪರೀಕ್ಷೆಯಿಂದ ಕೆಲ ಅಭ್ಯರ್ಥಿಗಳು ವಂಚಿತರಾಗಿದ್ದಾರೆ. ಚಿಕ್ಕಮಗಳೂರು ನಗರದ ಹಲವು ಸೆಂಟರ್‌ಗಳಲ್ಲಿ ಟಿಇಟಿ ಪರೀಕ್ಷೆ ವೇಳೆ ಸಮಸ್ಯೆಯಾಗಿದ್ದು, ಆನ್‌ಲೈನ್‌ನಲ್ಲಿ ಎರಡು ಪ್ರತ್ಯೇಕ ಸೆಂಟರ್ ತೋರಿಸಿದೆ.
ಇದರಿಂದಾಗಿ ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು ಅಳಲು ತೊಡಿಕೊಂಡಿದ್ದಾರೆ. ಇಲ್ಲದ ಸಬೂಬು ನೀಡಿ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶವನ್ನು ಸಿಬ್ಬಂದಿ ನಿರಾಕರಿಸಿದರು. ಬಳ್ಳಾರಿಯಿಂದ ಬಂದಿದ್ದ ಅಭ್ಯರ್ಥಿಗಳು ಪರೀಕ್ಷೆ ಬರೆಯದೇ ವಂಚಿತರಾದರು.
ಪರೀಕ್ಷೆಯಲ್ಲಿ ಲೋಪವಾಗದಂತೆ ಕ್ರಮ
ಯಾದಗಿರಿ ಜಿಲ್ಲೆಯಲ್ಲಿ ಟಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ನಗರದ 27 ಪರೀಕ್ಷೆ ಕೇಂದ್ರಗಳಲ್ಲಿ 6,528 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅಭ್ಯರ್ಥಿಗಳನ್ನು ಪೂರ್ಣ ತಪಾಸಣೆ ನಡೆಸಿ ಪರೀಕ್ಷೆ ಕೇಂದ್ರದೊಳಗೆ ಬಿಡಲಾಗಿತ್ತು.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಪಾಸಣೆ ನಡೆಸಲಾಗಿದ್ದು, ಪರೀಕ್ಷೆ ಕೇಂದ್ರಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಎಲೆಕ್ಟ್ರಾನಿಕ್ ಡಿವೈಎಸ್, ಬ್ಲೂಟೂತ್, ಮೊಬೈಲ್ ಫೋನ್ ನಿಷೇಧಿಸಲಾಗಿತ್ತು. ಸಾಮಾಜಿಕ ಜಾಲತಾಣ ಮೂಲಕ ಗೊಂದಲ ಸೃಷ್ಟಿಸುವರ ವಿರುದ್ಧ ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆಯನ್ನು ಯಾದಗಿರಿ ಎಸ್‌ಪಿ ಡಾ. ಸಿ.ಬಿ. ವೇದಮೂರ್ತಿ ನೀಡಿದ್ದರು.
ಟಿಇಟಿ ಪರೀಕ್ಷೆಯ ಪತ್ರಿಕೆ-1ಕ್ಕೆ 1,54,929, ಪತ್ರಿಕೆ-2ಕ್ಕೆ 2, 06456 ಅರ್ಜಿಗಳು ಬಂದಿವೆ. ರಾಜ್ಯಾದ್ಯಂತ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಪತ್ರಿಕೆ-1ಕ್ಕೆ 589 ಪರೀಕ್ಷಾ ಕೇಂದ್ರಗಳಿದ್ದರೆ, ಪತ್ರಿಕೆ-2ಕ್ಕೆ 781 ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗಿದೆ. ಮೊದಲ ಪರೀಕ್ಷೆ 9.30ರಿಂದ 12 ಹಾಗೂ ಎರಡನೇ ಪರೀಕ್ಷೆ 2 to 4.30 ನಡೆದಿದೆ.
ಇದನ್ನೂ ಓದಿ | Vistara News Launch | ವಿಸ್ತಾರ ಕನ್ನಡ ಸಂಭ್ರಮ ಹೇಗಿದೆ? ಇಲ್ಲಿವೆ ಫೋಟೊಗಳು