Site icon Vistara News

TET Scam | ಪಿಎಸ್‌ಐ ಸ್ಕ್ಯಾಮ್‌ ನಂತರ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ?; ರಾಜ್ಯಾದ್ಯಂತ ತನಿಖೆಗೆ ಆಗ್ರಹ

TET scam ಧಾರವಾಡದಲ್ಲಿ ಅಭ್ಯರ್ಥಿಗಳ ಆತಂಕ

ಧಾರವಾಡ: 2022ರ ಮೇ ತಿಂಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗಿದ್ದು, ಅದರಲ್ಲೂ ಅಕ್ರಮ (TET Scam) ನಡೆದಿದೆ ಎನ್ನಲಾಗಿದೆ. ದಾಖಲಾತಿ ಪರಿಶೀಲನೆಗೆ ಹಾಜರಾಗದವರ ಹೆಸರೂ ಪಟ್ಟಿಯಲ್ಲಿ ಪ್ರಕಟವಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ಮೇ ತಿಂಗಳಲ್ಲಿ ಸಿಇಟಿ ಪರೀಕ್ಷೆ ನಡೆಸಿ ಶಿಕ್ಷಕರ ನೇಮಕಾತಿಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಂದ ದಾಖಲೆಗಳ ಪರಿಶೀಲನೆಯನ್ನು ಸರ್ಕಾರ ನಡೆಸಿತ್ತು. ವಿಪರ್ಯಾಸವೆಂದರೆ ಸಿಇಟಿ ಪರೀಕ್ಷೆ ಪಾಸಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳ ಹೆಸರನ್ನೂ ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಲಾಗಿದ್ದು, ಇದು ಅರ್ಹ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಸತೀಶ್, ಜಲರೆಡ್ಡಿ, ಅನೀಲ್, ಕವಿತಾ ಜಿ, ತೋಗಾಂವ, ಪ್ರಿಯಾಂಕ್ ಬಸವರಾಜ್, ಅಜ್ಜಪ್ಪ, ಶರಣಪ್ಪ, ಪೂರ್ಣಚಂದ್ರ ಹಾಗೂ ಅನುರಾಜ್ ಎಂಬುವವರು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೂ ಅವರ ಹೆಸರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಲಾಗಿದೆ. ಸ್ವತಃ ಈ ಅಭ್ಯರ್ಥಿಗಳೇ ತಾವು ದಾಖಲೆಗಳ ಪರಿಶೀಲನೆಗೆ ಹಾಜರಾಗಿಲ್ಲ ಎಂದೂ ಹೇಳಿಕೊಂಡಿದ್ದಾರಂತೆ.

ಇದು ಕೇವಲ ರಾಯಚೂರು ಜಿಲ್ಲೆಯಲ್ಲಿ ನಡೆದ ಅಕ್ರಮವಾಗಿದ್ದು, ರಾಜ್ಯಾದ್ಯಂತ ಇಂತಹ ಎಷ್ಟು ಅಭ್ಯರ್ಥಿಗಳ ಹೆಸರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಲಾಗಿದೆಯೋ ಗೊತ್ತಿಲ್ಲ. ಇದು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾಡಿದ ದೊಡ್ಡ ಅನ್ಯಾಯ. ಕೂಡಲೇ ಇದನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಡೆಹಿಡಿದು ಮರಪಟ್ಟಿ ಬಿಡುಗಡೆ ಮಾಡಬೇಕು ಎಂದು ರಾಯಚೂರಿನ ಅಭ್ಯರ್ಥಿಗಳು ಧಾರವಾಡದಲ್ಲಿ ಒತ್ತಾಯ ಮಾಡಿದ್ದಾರೆ.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಘಟನೆ ಇನ್ನೂ ಜನಮಾನಸದಿಂದ ದೂರವಾಗುವ ಮುಂಚೆಯೇ ಇದೀಗ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ಪ್ರಕರಣದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ತನಿಖೆಗೆ ಆದೇಶಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Kantara Film | ನಟ ಕಮಲ್ ಹಾಸನ್‌ಗೆ ಕಮಾಲ್ ಮಾಡಿದ ಕಾಂತಾರ ಸಿನಿಮಾ!

Exit mobile version