Site icon Vistara News

Text book | ಪಠ್ಯ ಪುಸ್ತಕ ಪರಿಷ್ಕರಣೆ ಎಡವಟ್ಟು ತಿದ್ದಲಿದೆ ಶಿಕ್ಷಣ ಇಲಾಖೆ!

ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳು ಶುರುವಾದರೂ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಗಿಯುವ ಹಾಗೆ ಕಾಣುತ್ತಿಲ್ಲ. ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಮತ್ತೊಂದು ಹಂತಕ್ಕೆ ತಲುಪಿ ಗುದ್ದಾಟ ಶುರುವಾಗಿದೆ. ಪಠ್ಯದಲ್ಲಿನ ಎಡವಟ್ಟು ಸರಿಪಡಿಸುವ ಹೊಣೆಯನ್ನು ಈಗ ಸರ್ಕಾರ ಶಿಕ್ಷಣ ಇಲಾಖೆಗೆ ಒಪ್ಪಿಸಿದೆ.

ಇದನ್ನೂ ಓದಿ | ಪಠ್ಯ ಪುಸ್ತಕ ಪರಿಷ್ಕರಣೆ: ಗೌಡರ ಪತ್ರದ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ

ಪಠ್ಯಪುಸ್ತಕ ಪರಿಷ್ಕರಣೆಯು ರಾಜಕೀಯ ತಿರುವು ಪಡೆದುಕೊಂಡು ಬಹಳ ದಿನಗಳೇ ಕಳೆದಿದ್ದು, ರೋಹಿತ್ ಚಕ್ರತೀರ್ಥ ಸಮಿತಿಯ ಕೆಲವು ಎಡವಟ್ಟುಗಳನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಸಿಎಂ ಬಸವರಾಜ ಬೊಮ್ಮಯಿ ಸೂಚನೆಯಂತೆ ಶಿಕ್ಷಣ ಇಲಾಖೆ ಈ ಕಾರ್ಯಕ್ಕೆ ಕೈ ಹಾಕಿದೆ.

ಇದಕ್ಕಾಗಿ ಯಾವುದೇ ಹೊಸ ಸಮಿತಿ ರಚಿಸಲಾಗುತ್ತಿಲ್ಲ. ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳ ನೆರವು ಪಡೆಯುತ್ತಿಲ್ಲ. ಬದಲಾಗಿ ಯಾವುದೇ ವಿವಾದಗಳಿಗೆ ಅವಕಾಶ ಇಲ್ಲದಂತೆ ಶಿಕ್ಷಣ ಇಲಾಖೆಯೇ ತಪ್ಪುಗಳನ್ನ ಸರಿಪಡಿಸಲು ಮುಂದಾಗಿದೆ.

ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಶಿಕ್ಷಣ ಇಲಾಖೆಯು ಡಯಟ್ ಪ್ರಾಂಶುಪಾಲರು ಹಾಗೂ ನುರಿತ ಶಿಕ್ಷಕರ ಸಹಾಯ ಪಡೆಯಲಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಮಾಹಿತಿ ನೀಡಿದ್ದಾರೆ. “”ನಾವು ಯಾವುದೇ ರೀತಿಯ ಹೊಸ ಸಮಿತಿ ರಚನೆ ಮಾಡಲು ಹೋಗುವುದಿಲ್ಲ. ಜತೆಗೆ ಶಿಕ್ಷಣ ತಜ್ಞರ ಸಹಾಯವನ್ನೂ ಪಡೆಯುವುದಿಲ್ಲ. ಆದರೆ ಬಸವಣ್ಣನವರ ವಿಚಾರದಲ್ಲಿ ಸ್ವಾಮೀಜಿಗಳ ಸಲಹೆ ಪಡೆಯಲಾಗುವುದುʼʼ ಎಂದರು.

ಈ ಮೊದಲು ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಮುಂದುವರಿಸಲು ಚಿಂತನೆ ನಡೆದಿತ್ತು. ಆದರೆ ಮಧ್ಯಪ್ರವೇಶಿಸಿದ ಸಾಣೆಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “”ಈಗೀನ ಪರಿಷ್ಕರಣೆ ಮಾತ್ರವಲ್ಲದೆ ಹಿಂದಿನ ಎರಡು ಸಮಿತಿಯ ಪಠ್ಯಪುಸ್ತಕದಲ್ಲೂ ಬಸವಣ್ಣ ಕುರಿತು ತಪ್ಪು ಮಾಹಿತಿ ದಾಖಲಾಗಿದೆʼʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಬಸವಣ್ಣನವರ ಪಠ್ಯದ ವಿಷಯದಲ್ಲಿ ಮಾತ್ರ ಸ್ವಾಮೀಜಿಗಳ ಸಲಹೆ ಪಡೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ | ತುಕಡೆ ತುಕಡೆ ಗ್ಯಾಂಗ್‌ ರೀತಿಯಲ್ಲೆ ಬರಗೂರು ಕೆಲಸ: ಸಚಿವ ನಾಗೇಶ್‌

Exit mobile version