Site icon Vistara News

ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಪಾದಯಾತ್ರೆ

B C NAGESH

ಹಾಸನ: ಪಠ್ಯ ಪರಿಷ್ಕರಣೆ ಕೈಬಿಡಬೇಕೆಂದು ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದ್ದಾರೆ. ʼʼಜೂನ್ 15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಸಲಾಗುವುದು. ಪಠ್ಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ಪಠ್ಯವನ್ನೇ ಮುಂದುವರಿಸಬೇಕುʼʼ ಎಂದವರು ಆಗ್ರಹಿಸಿದ್ದಾರೆ.

ʼʼಈ ಪಾದಯಾತ್ರೆ ಪಕ್ಷಾತೀತವಾಗಿ ನಡೆಯಲಿದೆ. ಇದಕ್ಕಾಗಿ ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯ ಸಾಹಿತಿಗಳು‌, ನಾನಾ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ನಾಡಿನ ಎಲ್ಲ‌ ಕ್ಷೇತ್ರಗಳ ಪ್ರಮುಖರನ್ನು ಪಾದಯಾತ್ರೆಗೆ ಆಹ್ವಾನಿಸಲಾಗಿದೆʼʼ ಎಂದವರು ಹೇಳಿದ್ದಾರೆ.

ʼʼಪಾದಯಾತ್ರೆಯು ಬೆಳಗ್ಗೆ 7 ಗಂಟೆಗೆ ಕವಿಶೈಲದಿಂದ ಆರಂಭಗೊಂಡು 11 ಗಂಟೆಗೆ ತೀರ್ಥಹಳ್ಳಿ ತಲುಪಲಿದೆ. ಈ ಹಿಂದಿನ ಸಮಿತಿ ಸಾಕಷ್ಟು ಸಮಯಾವಕಾಶ ಪಡೆದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಆದರೀಗ ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆʼʼ ಎಂದವರು ಟೀಕಿಸಿದ್ದಾರೆ.

ʼʼಸಮಿತಿ ರದ್ದು ಮಾಡಿದರೆ ಸಾಲದು, ಪಠ್ಯಪುಸ್ತಕವನ್ನೇ ರದ್ದು ಮಾಡಬೇಕು. ಪಠ್ಯ ಪರಿಷ್ಕರಣೆ ಮಾಡಿ ಕುವೆಂಪು, ಅಂಬೇಡ್ಕರ್ ಸಹಿತ ಹಲವಾರು ಗಣ್ಯರನ್ನು ಅವಮಾನ ಮಾಡಲಾಗಿದೆ. ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕಾರ್ಯ ಸರಕಾರದಿಂದ ನಡೆದಿದೆʼʼ ಎಂದು ಕಿಮ್ಮನೆ ಕಿಡಿ ಕಾರಿದರು.

ರಾಷ್ಟ್ರೋತ್ಥಾನ ಬಳಗದಿಂದ ವಿಚಾರ ಸಂಕಿರಣ

ಈ ನಡುವೆ, ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಸತ್ಯ – ಮಿಥ್ಯ ವಿಚಾರ ಸಂಕಿರಣವನ್ನು ರಾಷ್ಟ್ರೋತ್ಥಾನ ಬಳಗದಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು. ವಿಚಾರ ಸಂಕಿರಣವನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಇವರಿಗೆ ಗುಜರಾತ್ ಕೇಂದ್ರೀಯ ವಿವಿಯ ವಿಶ್ರಾಂತ ಕುಲಪತಿ ಎಸ್.ಎ. ಬಾರಿ ಮತ್ತು ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಸುಧೀಂದ್ರ ಸಾಥ್‌ ನೀಡಿದರು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ʼʼಟೀಕೆಗಳು ಸತ್ಯಕ್ಕೆ ಅಪಪ್ರಚಾರವಾಗುವಂತೆ ಇರಬಾರದು. ಟೀಕೆಗೆ ಸ್ಪಷ್ಟನೆ ನೀಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅವಕಾಶಕ್ಕೆ ತಕ್ಕಂತೆ ಕಾಲಕಾಲಕ್ಕೆ ಸರ್ಕಾರ ಪಠ್ಯಪುಸ್ತಕ ಬದಲಾವಣೆ ಮಾಡಿದೆ. ಈ ಹಿಂದೆ ಬರಗೂರು ಸಮಿತಿ ಪಠ್ಯಪುಸ್ತಕ ಬದಲಾವಣೆ ಮಾಡಿತ್ತು. ಈಗ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ಪಠ್ಯ ಪರಿಷ್ಕರಣೆ ಮಾಡಿದೆ. ಈ ಸಮಿತಿಯು ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿಲ್ಲ ಎಂದು ಹಿಂದೆಯೇ ಸ್ಪಷ್ಟಪಡಿಸಿದ್ದೇವೆ. ಹಾಗೆಯೇ ಭಗತ್ ಸಿಂಗ್, ಬಸವೇಶ್ವರ, ಕುವೆಂಪು ಪಠ್ಯ ಕೂಡ ಕೈಬಿಟ್ಟಿಲ್ಲ. ನಾರಾಯಣ ಗುರುಗಳ ವಿಚಾರಧಾರೆ ಪ್ರಚಾರಕ್ಕೆ 70 ಕೋಟಿ ‌ರೂ. ಕೊಟ್ಟ ನಮ್ಮ ಸರ್ಕಾರ ಅವರ ಪಠ್ಯ ಬಿಡಲು ಸಾಧ್ಯವೆʼʼ ಎಂದವರು ಪ್ರಶ್ನಿಸಿದರು.

ಕಾಂಗ್ರೆಸ್‌ ವಿರುದ್ಧ ಬಿ ಸಿ ನಾಗೇಶ್‌ ಕಿಡಿ

ʼʼಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಮುಖ್ಯಮಂತ್ರಿಯವರು ಶಿಕ್ಷಣ ತಜ್ಞರು ಮತ್ತು ಪರಿಣತರ ಜೊತೆ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಹೊಸದಾಗಿ ಪೂರ್ತಿಯಾಗಿ ಪಠ್ಯ ಮುದ್ರಣ ಮಾಡುವುದಿಲ್ಲ. ಕೆಲವು ಪುಟಗಳನ್ನು ಮಾತ್ರ ಮುದ್ರಿಸುತ್ತಾರೆ. ಸಂವಿಧಾನ ಶಿಲ್ಪಿ ಅನ್ನೋ ಪದ ತೆಗೆದಿದ್ದರು, ಆ ಪದ ಮುದ್ರಣ ಮಾಡ್ತಾರೆʼʼ ಎಂದು ಸಚಿವರು ವಿವರಿಸಿದರು.

ಇದನ್ನೂ ಓದಿ | ಮುಗಿಯಲಿಲ್ಲ ಪಠ್ಯಪುಸ್ತಕ ವಿವಾದ: ಮರು ಪರಿಷ್ಕರಣೆ ಆದರೆ ₹158 ಕೋಟಿ ಹೊರೆ

ಹೆಡ್ಗೆವಾರ್ ವಿಚಾರಧಾರೆ ಯಾಕೆ ಪಠ್ಯದಲ್ಲಿ ಅಳವಡಿಸಬಾರದು?

ʼʼವಂದೇ ಮಾತರಂ ಚಳವಳಿ ಆರಂಭಿಸಿದ ಹೆಡ್ಗೆವಾರ್ ಅವರ ಪಠ್ಯ ಅಳವಡಿಸಬಾರದೆ? ಹೆಡ್ಗೆವಾರ್ ಅವರ ರಾಷ್ಟ್ರೀಯ ಚಿಂತನೆ, ದೇಶಭಕ್ತಿ ಮಕ್ಕಳಲ್ಲಿ ಮೂಡಬಾರದೆ? ಕಾಶ್ಮೀರದಲ್ಲಿ 371ನೇ ವಿಧಿ ರದ್ದುಪಡಿಸಿ, ಪ್ರತಿ ದಿನ ಸರಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತಹ ಶಕ್ತಿ ಸಿಕ್ಕಿದ್ದು ಹೆಡ್ಗೆವಾರ್ ಚಿಂತನೆಯಿಂದʼʼ ಎಂದು ಅವರು ಹೇಳಿದರು.

ಇದನ್ನೂ ಓದಿ | ಪಠ್ಯಪುಸ್ತಕ ನೆಪದಲ್ಲಿ ಅಶಾಂತಿ: ಸಿಎಂ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ

Exit mobile version