Site icon Vistara News

Text Revision : 7ನೇ ಕ್ಲಾಸ್‌ ಪಠ್ಯದಲ್ಲಿ ಮತ್ತೆ ಬಂತು ಏಸು ಕ್ರಿಸ್ತ, ಇಸ್ಲಾಮಿಕ್‌ ಸಾಮ್ರಾಜ್ಯದ ಕಥೆ

Text Change

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ (Text book Controversy) ವಿಷಯದಲ್ಲಿ ಧರ್ಮ ದಂಗಲ್‌ (Dharma Dangal) ಮುಗಿಯುವಂತೆ ಕಾಣುತ್ತಿಲ್ಲ. ಬದಲಾಗಿ ಅದು ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ (Rohit Chakratheertha) ಅವರ ನೇತೃತ್ವದಲ್ಲಿ ನಡೆದ ಪಠ್ಯ ಪರಿಷ್ಕರಣೆಯಲ್ಲಿ (Text Revision) ಆರೆಸ್ಸೆಸ್‌ ಸಂಬಂಧಿತ, ಹಿಂದುತ್ವ ಸಂಬಂಧಿತ ವಿಚಾರಗಳನ್ನು ಅನಗತ್ಯವಾಗಿ ತುರುಕಲಾಗಿದೆ ಎಂದು ಕಾಂಗ್ರೆಸ್‌ ಆಪಾದಿಸಿತ್ತು. ಈಗ ಹಳೆ ಪಠ್ಯ ತೆಗೆದು ಹೊಸ ವಿಷಯಗಳನ್ನು ಸೇರಿಸಿರುವ ಕಾಂಗ್ರೆಸ್‌ ಸರ್ಕಾರ ಏಳನೇ ತರಗತಿ ಪಠ್ಯದಲ್ಲಿ ಹಿಂದೆ ಇದ್ದ ಏಸು ಕ್ರಿಸ್ತರ ಬೋಧನೆಗಳು, ಇಸ್ಲಾಮಿಕ್‌ ಸಾಮ್ರಾಜ್ಯದ ಕಥೆಗಳನ್ನು ಮತ್ತೆ ಪಠ್ಯವಾಗಿಸಿದೆ.

ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ ಪರಿಷ್ಕರಣೆಯನ್ನು ಟಾರ್ಗೆಟ್‌ ಮಾಡಿತ್ತು. ಹಿಂದಿನಿಂದಲೂ ಅದು ವಿರೋಧಿಸಿಕೊಂಡು ಬಂದಿದ್ದ ವೀರ್‌ ಸಾವರ್ಕರ್‌ ಪಾಠ, ಆರೆಸ್ಸೆಸ್‌ ಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಕುರಿತ ಪಠ್ಯಗಳನ್ನು ಕಿತ್ತು ಹಾಕಿ ಪರಿಷ್ಕರಣೆಗೆ ಮುಂದಾಗಿತ್ತು. ಹಿಂದಿನ ಪಠ್ಯದಲ್ಲಿದ್ದ ಕೆಲವೊಂದು ಪಾಠಗಳನ್ನು ಮಾಡದಂತೆ ಸೂಚನೆ ನೀಡಿದ್ದರೆ ಕೆಲವು ತರಗತಿಗಳಿಗೆ ಹಳೆ ಪಾಠ ತೆಗೆದು, ಹೊಸ ಪಾಠ ಸೇರಿಸಿ ಹೊಸ ಪಠ್ಯ ಪುಸ್ತಕವನ್ನೇ ಶಾಲೆಗಳಿಗೆ ತಲುಪಿಸಿದೆ.

ಆದರೆ, ವಿವಾದದ ಮೂಲ ಬಿಂದು ಅದಲ್ಲ!

ಏಳನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಜಗತ್ತಿನ ಪ್ರಮುಖ ಘಟನೆಗಳು ಎಂಬ ವಿಷಯವನ್ನು ಮತ್ತೆ ಸೇರಿಸಲಾಗಿದೆ. ಇದರಲ್ಲಿ ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಧರ್ಮದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಲಾಗಿದೆ.

ಮತ್ತೆ ಬಂದ ಪಾಠ
ಪಠ್ಯದಲ್ಲಿ ಏನಿದೆ?

ಗುಂಪಿನಲ್ಲಿ ಚರ್ಚಿಸುವ ಚಟುವಟಿಕೆ ಬದಲು

ನಿಜವೆಂದರೆ, ಈ ಪಾಠ 2013ರಿಂದ 2018ರವರೆಗೆ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದ ಕಾಲದಲ್ಲೂ ಇತ್ತು. ಅದೇ ಪಾಠವನ್ನು ಈಗ ಮರುಮುದ್ರಿಸಲಾಗಿದೆ. ರೋಹಿತ್‌ ಚಕ್ರತೀರ್ಥ ಅವರ ಮೂಲಕ ಪರಿಷ್ಕರಣೆಗೊಂಡ ಪಠ್ಯದಿಂದ ಈ ಪಾಠವನ್ನು ತೆಗೆಯಲಾಗಿತ್ತು. 2023-24ರ ಸಾಲಿಗೆ ಇದನ್ನು ಮರು ಸೇರಿಸಲಾಗಿದೆ.

ಆದರೆ, ಈ ಪಾಠದ ಅಂತ್ಯದಲ್ಲಿ ಬರುವ ಚಟುವಟಿಕೆ ಭಾಗದಲ್ಲಿ ಈ ಹಿಂದೆ ಕೆಲವೊಂದು ವಿವಾದಾತ್ಮಕ ವಿಚಾರಗಳನ್ನು ಉಲ್ಲೇಖಿಸಲಾಗಿತ್ತು. ಅದನ್ನು ಈಗ ತೆಗೆದುಹಾಕಲಾಗಿದೆ.

ಹಿಂದಿನ ಪಾಠದ ಅಂತ್ಯದಲ್ಲಿದ್ದ ಚಟುವಟಿಕೆಯಲ್ಲಿ

  1. ಏಸು ಕ್ರಿಸ್ತರ ಜೀವನವನ್ನು ಕುರಿತು ಬರೆಯಿರಿ.
  2. ಜೀಸಸ್‌ ಕ್ರಿಸ್ತರ ಬೋಧನೆಗಳನ್ನು ಪಟ್ಟಿ ಮಾಡಿ
  3. ಕ್ರೈಸ್ತ ಮತವು ಹೇಗೆ ಪ್ರಸಾರವಾಯಿತು?
  4. ಮೊಹಮ್ಮದ್‌ ಪೈಗಂಬರರ ಜೀವನವನ್ನು ತಿಳಿಸಿರಿ
  5. ಹಿಜಿರಾ ಎಂದರೇನು?
  6. ಇಸ್ಲಾಂ ಧರ್ಮದ ನಿಯಮಗಳು ಯಾವುವು? ಎಂದು ಕೇಳಲಾಗಿತ್ತು.
2013-18ರ ಅವಧಿಯಲ್ಲಿ ಇದ್ದ ಚಟುವಟಿಕೆ

ಜತೆಗೆ ಕೆಲವೊಂದು ಚಟುವಟಿಕೆಗಳನ್ನು ಉಲ್ಲೇಖಿಸಲಾಗಿತ್ತು

  1. ನಿಮ್ಮ ಊರಿನ ಚರ್ಚ್‌ ಅಥವಾ ಮಸೀದಿಗಳಿಗೆ ಭೇಟಿ ನೀಡಿ ಅಲ್ಲಿನ ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ
  2. ಇಸ್ಲಾಂ ಮತದ ಸಾಂಸ್ಕೃತಿಕ ಆಚರಣೆಗಳನ್ನು ತಿಳಿದುಕೊಳ್ಳಿ.
  3. ಇಸ್ಲಾಂ ಮತದವರು ರಂಜಾನ್‌ ಆಚರಿಸುವ ಕ್ರಮವನ್ನು ತಿಳಿಸಿ
  4. ಮತ್ತು ಯೋಜಿತ ಕಾರ್ಯವಾಗಿ ʻಕ್ರೈಸ್ತ ಮತ್ತು ಇಸ್ಲಾಂ ಮತಗಳು ಪ್ರಸಾರವಾದ ಬಗ್ಗೆ ಶಿಕ್ಷಕರ ನೆರವಿನಿಂದ ಪ್ರಬಂಧ ಬರೆಯಿರಿ ಎಂದು ಹೇಳಲಾಗಿತ್ತು.

ಈ ಬಾರಿ ಚಟುವಟಿಕೆ ಭಾಗ ಬದಲಾಗಿದೆ

ಆದರೆ, ಈ ಬಾರಿ ಚಟುವಟಿಕೆ ವಿಭಾಗದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಇದ್ದ ಮಸೀದಿಗೆ ಹೋಗಿ, ಉರೂಸ್‌ಗೆ ಹೋಗಿ ಎಂಬ ವಿವಾದಾತ್ಮಕ ಭಾಗಗಳನ್ನು ತೆಗೆಯಲಾಗಿದೆ. ಹೊಸ, ಅಷ್ಟೇನೂ ವಿವಾದಾತ್ಮಕವಲ್ಲದ ಪ್ರಶ್ನೆ ಮತ್ತು ಚಟುವಟಿಕೆಗಳನ್ನು ನೀಡಲಾಗಿದೆ.

ಈ ಬಾರಿ ಪಾಠ ಅದೇ ಚಟುವಟಿಕೆ ಬದಲಾಗಿದೆ.

ಗುಂಪುಗಳಲ್ಲಿ ಚರ್ಚಿಸಿ, ಉತ್ತರಿಸಿ ಎಂಬ ವಿಭಾಗದಲ್ಲಿ ಇರುವ ಪ್ರಶ್ನೆಗಳೆಂದರೆ,
1. ಯೇಸು ಕ್ರಿಸ್ತ ಎಲ್ಲಿ ಜನಿಸಿದರು? ಅವರ ತಾಯಿ ಯಾರು?
2. ಕ್ರೈಸ್ತ ಧರ್ಮದ ಮೂಲ ಗ್ರಂಥ ಯಾವುದು?
3. ಯೇಸು ಕ್ರಿಸ್ತರ ಮುಖ್ಯ ಬೋಧನೆಗಳು ಯಾವುವು? ಹೀಗೆ 10 ಸರಳ ಪ್ರಶ್ನೆಗಳಿವೆ.

ಈ ಹಿಂದೆ ಮಸೀದಿಗೆ ಹೋಗಿ, ಉರೂಸಿಗೆ ಹೋಗಿ ಎಂಬ ಚಟುವಟಿಕೆಯನ್ನು ಬದಲಿಸಿ ನಾಲ್ಕು ಸರಳ ವಿಚಾರಗಳಿಗೆ ಫೋಕಸ್‌ ಮಾಡಲಾಗಿದೆ.
1. ಬೈಬಲ್‌ನ ದೃಷ್ಟಾಂತ ಕಥೆಗಳನ್ನು ಓದಿ
2. ಯೇಸು ಕ್ರಿಸ್ತನ ಜೀವನ ಚರಿತ್ರೆಯನ್ನು ಓದಿ
3. ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯನ್ನು ಓದಿ
4. ಭೂಪಟದಲ್ಲಿ ಕ್ರೈಸ್ತ ಮತ್ತು ಇಸ್ಲಾಂ ರಿಲಿಜನ್‌ ಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಗುರುತಿಸಿ.

ಏಳನೇ ತರಗತಿಯ ಪಠ್ಯದಲ್ಲಿ ಮತ್ತೆ ಹಳೆ ಪಾಠವನ್ನು ಸೇರಿಸಿದ್ದನ್ನು ಕೆಲವು ಹಿಂದೂ ಸಂಘಟನೆಗಳು ಖಂಡಿಸಿವೆ.

ಇದನ್ನೂ ಓದಿ: Textbook Revision: ಪಠ್ಯ ಪರಿಷ್ಕರಣೆಗೆ ಲಾಬಿ; ದೇವನೂರ ಮಹಾದೇವ ಪಾಠ ಸೇರಿಸಲು ಎಸ್‌ಎಫ್‌ಐ ಪಟ್ಟು

Exit mobile version