Site icon Vistara News

Textbook controversy: ತಮ್ಮ ಕಥನವನ್ನು ಪಠ್ಯದಲ್ಲಿ ಸೇರಿಸಲು ನಿರಾಕರಿಸಿದ ದೇವನೂರು

ದೇವನೂರು

ಬೆಂಗಳೂರು: ಸರ್ಕಾರದ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ ಕಥನವನ್ನು ಪಠ್ಯದಲ್ಲಿ ಸೇರಿಸಲು ಅನುಮತಿ ನಿರಾಕರಿಸಿದ್ದಾರೆ. ತಮ್ಮ ಪಾಠವನ್ನು ಕೈಬಿಡಬೇಕೆಂದು ಅವರು ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದಾರೆ.

“ ಪಠ್ಯ ಪರಿಷ್ಕರಣೆಯ ವಾದ ವಿವಾದಗಳು ನಡೆಯುತ್ತಿದೆ. ಹತ್ತನೆ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ, ಕೆಲವು ಸಲ ಸೇರಿದ್ದನ್ನು ಕೈ ಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿ ಗಳಿಗೆ ಗಳಿಗೆಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಸೇರಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆʼʼ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪರಿಷ್ಕರಣೆಗೂ ಮೊದಲು ಪಠ್ಯಗಳಲ್ಲಿದ್ದ ಎಲ್.ಬಸವರಾಜು, ಎ.ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಎಂತಲೇ ಅರ್ಥ ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವನೂರು ಮಹಾದೇವ ಬರೆದ ಪತ್ರ

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಜಾತಿಯವರನ್ನು ತುಂಬಿಕೊಂಡಿದ್ದಾರೆ. ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ ಎಂದು ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ

ಚಾತುವರ್ಣ ಹಿಂದೂ ಪ್ರಭೇದದ ಆರೆಸ್ಸೆಸ್ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ನೂತನ ಪಠ್ಯ ಪರಿಷ್ಕರಣೆಯಲ್ಲಿಯೂ ಇದೇ ಆಗಿದೆ ಎಂದು ದೇವನೂರು ಆರೋಪಿಸಿದ್ದಾರೆ.

ಈ ಪಠ್ಯಗಳಲ್ಲಾ ಪ್ರಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸಾಪ್, ಇ ಮೇಲ್, ಆನ್‌ಲೈನ್ ಕ್ಲಾಸ್ ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ ಎಂದು ಸಾಹಿತಿ ದೇವನೂರು ಪತ್ರದಲ್ಲಿ ತಿಳಿಸಿದ್ದಾರೆ.

Exit mobile version