ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಪಠ್ಯಪರಿಷ್ಕರಣೆ ಮಾಡಿ, ಸಾವರ್ಕರ್ ಸೇರಿ ಹಲವರ ಕುರಿತು ಸೇರಿಸಲಾದ ಅಧ್ಯಾಯಗಳನ್ನು ತೆಗೆದುಹಾಕಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ ಪಠ್ಯ ಪರಿಷ್ಕರಣೆ ವಿಷಯದಲ್ಲಿ (Textbook Revision) ಲಾಬಿ ಶುರುವಾಗಿದೆ. ಸಾಹಿತಿ ದೇವನೂರ ಮಹಾದೇವ ಅವರ ಪಾಠವನ್ನು ಪಠ್ಯಪುಸ್ತಕಕ್ಕೆ ಸೇರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ದೇವನೂರ ಮಹಾದೇವ ಅವರ ʼಎದೆಗೆ ಬಿದ್ದ ಅಕ್ಷರʼ ಪಾಠವನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (SFI) ಆಗ್ರಹಿಸಿದೆ. ರಾಜ್ಯ ಸರ್ಕಾರ ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ಸಮಿತಿ ರಚಿಸಿದೆ. ಇದನ್ನು ಎಸ್‌ಎಫ್‌ಐ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಎಂದು ತಿಳಿಸಿದೆ.
ಕಳೆದ ವರ್ಷ ಬಿಜೆಪಿ ಸರ್ಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲ ಪಾಠಗಳನ್ನು ಕಾಂಗ್ರೆಸ್ ಸರ್ಕಾರ ಮರುಸೇರ್ಪಡೆ ಮಾಡುತ್ತಿದೆ. ಆದರೆ 10ನೇ ತರಗತಿ ಪ್ರಥಮ ಭಾಷೆಯಾದ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರ ಮಹಾದೇವರ ʼಎದೆಗೆ ಬಿದ್ದ ಅಕ್ಷರʼ ಎಂಬ ಪಾಠವು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತಿದ್ದುಪಡಿ ಅಥವಾ ಸೇರ್ಪಡೆ ಪಟ್ಟಿಯಲ್ಲಿ ಇಲ್ಲದಿರುವುದು ನೋವಿನ ವಿಷಯವಾಗಿದೆ ಎಂದು ಎಸ್‌ಎಫ್‌ಐ ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ: Textbook Revision: ಪಠ್ಯ ಪುಸ್ತಕ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ; ಯಾವ ಪಾಠಗಳಿಗೆ ಕೊಕ್?
ಎದೆಗೆ ಬಿದ್ದ ಅಕ್ಷರ ಪಾಠವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಕೋಮುವಾದದ ವಿರುದ್ಧ ದೇವನೂರ ಮಹಾದೇವ ಅವರು ಬಹಿರಂಗವಾಗಿ ಪ್ರತಿಭಟನೆ ಮಾಡಿದ್ದರು. ಹಾಗೂ ತಮ್ಮ ಪುಸ್ತಕವಾದ ಎದೆಗೆ ಬಿದ್ದ ಅಕ್ಷರದ ಭಾಗವನ್ನು ಗದ್ಯಭಾಗದಲ್ಲಿ ಪ್ರಕಟಿಸಲು ನೀಡಿದ್ದ ಅನುಮತಿ ವಾಪಸ್ ಪಡೆದಿದ್ದರು. ಆದರೆ, ಈಗ ಮುಖ್ಯಮಂತ್ರಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಇದರ ಬಗ್ಗೆ ಗಮನಹರಿಸಿ 10ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಅವರ ಪಾಠ ಸೇರಿಸಬೇಕು ಎಂದು ಆಗ್ರಹಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ಹಲವು ಸಾಹಿತಿಗಳು, ಚಿಂತಕರು ಭೇಟಿ ನೀಡಿ ಪಠ್ಯಪರಿಷ್ಕರಣೆ, ಹಿಜಾಬ್ ಸೇರಿ ಹಲವು ವಿಷಯಗಳ ಕುರಿತು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.