Site icon Vistara News

Karnataka Politics: ರಾಜ್ಯದಲ್ಲಿ ಬಿಜೆಪಿ ಇನ್ನೆಂದೂ ತಲೆ ಎತ್ತಿ ಮೇಲೆ ಏಳಲ್ಲ ಎಂದ ಎಂ.ಬಿ. ಪಾಟೀಲ್‌

Bengaluru News A high level committee submitted a preliminary report to Minister M B Patil at bengluru

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಬಿಜೆಪಿ (Karnataka Politics) ಮುಳುಗುತ್ತಿರುವ ಹಡಗು, ಅಲ್ಲ ಮುಳುಗಿರುವ ಹಡಗು. ಅದಕ್ಕೆ ಭವಿಷ್ಯವಿಲ್ಲಾ, ಇನ್ನೆಂದೂ ಬಿಜೆಪಿ ತಲೆ ಎತ್ತಿ ಮೇಲೆ ಏಳಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಬಿಜೆಪಿ ಟಿಕೆಟ್ ಕೊಡಿಸಲು ನಿವೃತ್ತ ಎಂಜಿನೀಯರ್‌ಗೆ ವಂಚನೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆ ಚೈತ್ರಾ ಟಿಕೆಟ್ ವಿಚಾರದಲ್ಲಿ ಮೋಸ ಮಾಡಿದ್ದರು. ಬಿಜೆಪಿಯ 40 ಪರ್ಸೆಂಟ್ ಸರ್ಕಾರವನ್ನು ನೋಡಿದ್ದೇವೆ. ಅವರಿಗೆ ಇಲ್ಲಿಯವರೆಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಕೂಡ ಕರ್ನಾಟಕದ ಸೋಲಿನಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಿಳಿಸಿದರು.

ಇಲ್ಲಿನ ನಾಯಕರ ಮೇಲಿನ ಸಿಟ್ಟಿನಿಂದ ವಿರೋಧ ಪಕ್ಷದ ನಾಯಕರ ನೇಮಕ ಹಾಗೂ ಆಧ್ಯಕ್ಷರ ಬದಲಾವಣೆಯಾಗಿಲ್ಲ. ಇದು ಅವರ ಪಕ್ಷದ ಕಥೆ, ರಾಜ್ಯದಲ್ಲಿ ಬಿಜೆಪಿಯದ್ದು ಮುಗಿದು ಹೋದ ಕಥೆ. ಇನ್ನೆಂದೂ ಬಿಜೆಪಿ ತಲೆ ಎತ್ತಿ ಮೇಲೆ ಏಳಲ್ಲ ಎಂದು ಹೇಳಿದರು.

ಇದನ್ನೂ ಓದಿ | Haveri News: ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯದಲ್ಲಿ ಏರುಪೇರು; ಗೊರವಯ್ಯ ಭವಿಷ್ಯವಾಣಿ

ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸೂಕ್ತ ಎಂದ ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು ಬಿಎಸ್‌ವೈ. ಅವರಂತಹ ಜಾತ್ಯತೀತ, ಸಮರ್ಥ ನಾಯಕ ಬೇಕು. ಒಟ್ಟಾರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ವಿಜಯದಶಮಿ ದಿನ ಹೇಳುತ್ತಿದ್ದೇನೆ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭಾ ಚುನಾವಣೆಗೆ ಹೋಗುವುದು ಸೂಕ್ತ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಕಾದು ನೋಡೋಣ. ಬಿಎಸ್‌ವೈ ಮುಂದೆ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಹಿಂದೆ ನಿಲ್ಲುತ್ತಾರೆ. ನಾನು ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಹೋಗಬೇಕು. ಮೊನ್ನೆ ಚುನಾವಣೆ ವೇಳೆ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರ ಕಾಲು ಏನಾದರೂ ಬಿದ್ದು ಹೋಗಿದ್ದವಾ? ಒಳಮೀಸಲಾತಿ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಎಲ್ಲವನ್ನೂ ವರ್ಷದ ಮುನ್ನ ಹೇಳಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಚುನಾವಣೆ ಒಂದು ವಾರದಲ್ಲಿ ಇದ್ದಾಗ ಈ ರೀತಿ ಮಾಡಿದರು. ಆದರೆ, ಬಿಎಸ್‌ವೈ ಎಲ್ಲ ಸಮುದಾಯದವರಿಗೆ ಅವಕಾಶ ಕೊಟ್ಟರು. ಅವರಂತಹ ಸದೃಢ ನಾಯಕ ಬೇಕು. ಅವರನ್ನು ಬದಲಾವಣೆ ಮಾಡೋದು ಬೇಡ ಅಂತ ಆವತ್ತು ಒತ್ತಡ ಹಾಕಿದ್ದೆವು. ಕೆಲ ನಾಯಕರು ಬಿಎಸ್‌ವೈರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಆರೋಪಿಸಿದರು.

ಇದನ್ನೂ ಓದಿ | Karnataka Politics: ಸಿಎಂ ಜನರ ಕೈಗೆ ಸಿಗಬೇಕು, ಹೋಟೆಲ್‌ನಲ್ಲಿ ಇರೋದಲ್ಲ: ಎಚ್‌ಡಿಕೆ ವಿರುದ್ಧ ಪರಮೇಶ್ವರ್ ಕಿಡಿ

ಹಾದಿ ಬೀದಿಯಲ್ಲಿ ಹೋಗುವವರಿಗೆ ನಾನೇಕೆ ಉತ್ತರ ಕೊಡಲಿ ಎಂದು ಮತ್ತೆ ಸಂಸದ ಸಿದ್ದೇಶ್ವರ್‌ ವಿರುದ್ಧ ಮುಗಿಬಿದ್ದ ರೇಣುಕಾಚಾರ್ಯ ಅವರು, ಅವರ ಬಗ್ಗೆ ನನಗೆ ಗೌರವವಿದೆ. ಅವರು ವಯಸ್ಸಿನಲ್ಲಿ ಸೀನಿಯರ್ ಆಗಿರಬಹುದು, ಆದರೆ ನಾನು ಪಕ್ಷದಲ್ಲಿ ಸೀನಿಯರ್. ಪಕ್ಷಕ್ಕಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದುತ್ವ ಇದೆ. ರೇಣುಕಾಚಾರ್ಯ ಮಾತನಾಡಿದರೆ ಪಕ್ಷ ದ್ರೋಹ, ಕೆಲವರು ಮಾತನಾಡಿದರೆ ಪಕ್ಷ ದ್ರೋಹ ಅಲ್ಲವಾ ಎಂದು ಕಿಡಿಕಾರಿದರು.

Exit mobile version