ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ (Assault Case ) ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಕಾಕತಿ ಪೊಲೀಸರ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಅವರನ್ನು ವಶಕ್ಕೆ ಪಡೆದುಕೊಂಂಡಿದ್ದಾರೆ. ಸೋಮವಾರಿಂದ ಆರೋಪಿಗಳು ಪರಾರಿಯಾಗಿದ್ದರು ಹಾಗೂ ಪೊಲೀಸರು ಬಲೆ ಬೀಸಿ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಪ್ರೀತಿಸಿ ಓಡಿಹೋಗಿರುವ ನವಜೋಡಿಗಳ ಹುಡುಕಾಟಕ್ಕೂ ಪೊಲೀಸರು ಮುಂದಾಗಿದ್ದಾರೆ. ನವಜೋಡಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮೆರೆಸಿಕೊಂಡಿದ್ದಾರೆ. ವಂಟಮೂರಿ ಗ್ರಾಮದ ದುಂಡಪ್ಪ ನಾಯಕ(ಗಡ್ಕರಿ), ಪ್ರಿಯಾಂಕ ನಾಯಕ ಓಡಿಹೋದ ಜೋಡಿಗಳಾಗಿದ್ದಾರೆ.
ಏನಿದು ಪ್ರಕರಣ?
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಮನೆ ಬಿಟ್ಟು ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವಕನ ತಾಯಿಯನ್ನೇ ಬೆತ್ತಲೆಗೊಳಿಸಿದ ದುರುಳರು ದುರ್ವರ್ತನೆ ತೋರಿದ್ದಾರೆ.
ಕಮಲವ್ವ ಹಲ್ಲೆಗೊಳಗಾದವರು. ದುಂಡಪ್ಪ ಅಶೋಕ ನಾಯಕ್ ಎಂಬಾತ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಆದರೆ ಇದಕ್ಕೆ ಪ್ರಿಯಾಂಕಾ ಕುಟುಂಬಸ್ಥರ ವಿರೋಧ ಇತ್ತು. ಪ್ರಿಯಾಂಕಾ ಕುಟುಂಬಸ್ಥರು ಇಂದು ಸೋಮವಾರ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಮಧ್ಯರಾತ್ರಿಯೇ ದುಂಡಪ್ಪ ಪ್ರಿಯಾಂಕಾಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ.
ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾರ ಕುಟುಂಬಸ್ಥರೊಳಗೆ ಇದ್ದ ರಾಕ್ಷಸತ್ವ ಹೊರಬಂದಿತ್ತು. ದುಂಡಪ್ಪ ತಮ್ಮ ಮಗಳನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶಗೊಂಡಿದ್ದರು. ಹೀಗಾಗಿ ಯುವತಿ ಮನೆಯವರು ಮಧ್ಯರಾತ್ರಿ ದುಂಡಪ್ಪನ ಮನೆಗೆ ನುಗ್ಗಿ, ಕಲ್ಲು ತೂರಾಟ ಮಾಡಿದ್ದಾರೆ. ಇಡೀ ಮನೆಯನ್ನೇ ಧ್ವಂಸ ಮಾಡಿ ಕ್ರೂರವಾಗಿ ವರ್ತಿಸಿದ್ದಾರೆ.
ಇದನ್ನೂ ಓದಿ: Electric Shock: ಬೆಂಗಳೂರಲ್ಲಿ ಮತ್ತೊಂದು ವಿದ್ಯುತ್ ಅವಘಡ; ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ
ಇತ್ತ ಮನೆಯೊಳಗೆ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ಹೊಡೆದಿದ್ದಾರೆ. ಅಷ್ಟೆಕ್ಕೆ ಸುಮ್ಮನಾಗದೇ ಆಕೆಯ ಬಟ್ಟೆ ಬಿಚ್ಚಿಸಿ, ಮೆರವಣಿಗೆ ನಡೆಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಒಂಬತ್ತು ಮಂದಿ ಕಮಲ್ವಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗ್ನ ಮಾಡಿಬಿಟ್ಟರು ಸರ್! ಗೃಹಸಚಿವರೊಂದಿಗೆ ದುಃಖ ತೊಡಿಕೊಂಡ ಸಂತ್ರಸ್ತೆ
ಇನ್ನು ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಮಾತಾನಾಡಿದ ಡಾ. ಜಿ. ಪರಮೇಶ್ವರ್, ದುಂಡಪ್ಪ ಅಶೋಕ (24) ಎಂಬಾತ ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ಯುವಕನ ತಾಯಿ ಕಮಲವ್ವ ಗಡ್ಕರಿ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಇನ್ನು ಮನೆಬಿಟ್ಟು ಹೋದ ಹುಡುಗ-ಹುಡುಗಿಗಾಗಿ ಪೊಲೀಸರು ಟ್ರಾಪ್ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು, ಯುವತಿ ಕುಟುಂಬಸ್ಥರು ದೂರು ನೀಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತಿದ್ದರು. ಅಥವಾ ಊರಲ್ಲಿ ಹಿರಿಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಈ ರೀತಿ ಅಮಾನವೀಯ ವರ್ತನೆ ಸರಿಯಲ್ಲ ಎಂದರು.