ಉತ್ತರ ಕನ್ನಡ : ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ. ಸೆಟ್‌ಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ ಎಂದು ಅರಣ್ಯ ಭೂಮಿ ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯವನ್ನೊಳಗೊಂಡ ಸುಮಾರು 59,940 ಚ.ಕೀ.ಮೀ ಪ್ರದೇಶವನ್ನು ಡಾ. ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಅತಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಕರ್ನಾಟಕದಲ್ಲಿ 20,668 ಚ.ಕೀ.ಮೀ ಪ್ರದೇಶವು 1,576 ಹಳ್ಳಿಗಳಿಗೆ ವಿಸ್ತರಿಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಈಗಾಗಲೇ ಸಾಕಷ್ಟು ಕಾನೂನು ನೀತಿ, ನಿಯಮ ಅಳವಡಿಸಲಾಗಿದ್ದು, ವಿನಾಕಾರಣ ಹೆಚ್ಚಿನ ಕಾನೂನಿನ ಬಲ ಪ್ರಯೋಗದ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದಲ್ಲಿ ಜನಸಾಮಾನ್ಯರ ಜೀವನಕ್ಕೆ ಮಾರಕವಾಗಬಹುದು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತಿ ಸೂಕ್ಷ್ಮ ಪ್ರದೇಶ ನಿಗದಿಗೊಳಿಸಲಾದ ಅಂಶವು ಸ್ಥಳೀಯ ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಈ ವರದಿ ಅನುಷ್ಠಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದರು.
ಇದನ್ನು ಓದಿ|Kasturirangan Report | ಪರಿಸರ ಸೂಕ್ಷ್ಮ ಪ್ರದೇಶ; ಮತ್ತೊಂದು ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ