Site icon Vistara News

Pilot Training Scheme: ಕಾರ್ಮಿಕರ ಮಕ್ಕಳು ಪೈಲಟ್‌ ಆಗೋದು ಪಕ್ಕಾ; ತರಬೇತಿಗೆ ಕಾರ್ಮಿಕ ಇಲಾಖೆ ವಿಶಿಷ್ಟ ಯೋಜನೆ

35 crore crop damage insurance deposit for farmers of Yallapur constituency says MLA Shivaram Hebbar

ಬೆಂಗಳೂರು: ರಾಜ್ಯದ ಶ್ರಮಿಕ ವರ್ಗದ ಕುಟುಂಬದವರಿಗೆ ಭರಪೂರ ಯೋಜನೆಗಳನ್ನು ನೀಡುವ ಮೂಲಕ ಶ್ರಮಿಕ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ವಿವಾಹ ಸಹಾಯಧನ, ಉನ್ನತ ಶಿಕ್ಷಣಕ್ಕೆ ತರಬೇತಿ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಕಾರ್ಮಿಕ ಇಲಾಖೆ ಇದೀಗ ‘ಕಾರ್ಮಿಕ ಮಕ್ಕಳ ಬಾನಂಗಳ ಕನಸು ನನಸು’ ಮಾಡುವ ವಿಶಿಷ್ಟ ಯೋಜನೆ (Pilot Training Scheme) ಜಾರಿಗೆ ಮುಂದಡಿ ಇರಿಸಿದೆ.

ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಜತೆಗೆ ‘ಪೈಲಟ್‌ʼ ತರಬೇತಿ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 2ನೇ ಹಂತದ ನಗರಗಳಿಗೂ ವೈಮಾನಿಕ ಸೇವೆ ಒದಗಿಸುವ ‘ಉಡಾನ್’ ಯೋಜನೆಯಿಂದ ವೈಮಾನಿಕ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಹೀಗಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಉದ್ಯೋಗ ಲಭಿಸುವುದು ನಿಶ್ಚಿತ. ಹೀಗಾಗಿ ಕಾರ್ಮಿಕ ಇಲಾಖೆ “ಪೈಲಟ್ ಪಕ್ಕಾ” ಎಂಬ ಸೂತ್ರದಡಿ ‘ಪೈಲಟ್ ತರಬೇತಿ’ ಯೋಜನೆ ರೂಪಿಸಿ ಜಾರಿ ಮಾಡುತ್ತಿದೆ.

ಏನಿದು ಯೋಜನೆ?

ರಾಜ್ಯದ ವಿವಿಧೆಡೆಗಳಿಂದ ವಿಮಾನ ಚಲಾಯಿಸುವ (ಪೈಲಟ್) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿ ತಾಂತ್ರಿಕ ರೀತಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತರ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿ ಶುಲ್ಕದಿಂದ ಆರಂಭಗೊಂಡು ತರಬೇತಿ ಶುಲ್ಕ, ಎಫ್‍ಆರ್‌ಟಿಒಎಲ್ ಪರೀಕ್ಷಾ ಶುಲ್ಕ, ಗ್ರೌಂಡ್ ಸಬ್ಜೆಕ್ಟ್ ಪರೀಕ್ಷಾ ಶುಲ್ಕ, ವೈದ್ಯಕೀಯ ಪರೀಕ್ಷಾ ಶುಲ್ಕ ಹೀಗೆ ಎಲ್ಲ ಖರ್ಚು ವೆಚ್ಚಗಳನ್ನು ಮಂಡಳಿಯೇ ಒದಗಿಸುವ ಮೂಲಕ ಕಾರ್ಮಿಕ ಮಕ್ಕಳ ಪೈಲಟ್ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ದೊರಕಿಸಿ ಕೊಡುವ ಯೋಜನೆ ಜಾರಿ ಮಾಡಲಾಗಿದೆ.

ಇದನ್ನೂ ಓದಿ | OROP Scheme : ನಿವೃತ್ತ ಸೇನಾ ಸಿಬ್ಬಂದಿಗೆ ಪಿಂಚಣಿ ಬಾಕಿ ಕೊಡಲೇಬೇಕು: ಸುಪ್ರೀಂಕೋರ್ಟ್‌ ತಾಕೀತು

ದೇಶದಲ್ಲೇ ಮೊಟ್ಟ ಮೊದಲು ಎನ್ನುವ ಹಲವು ಯೋಜನೆಗಳನ್ನು ಜಾರಿ ಮಾಡಿರುವ ಕಾರ್ಮಿಕ ಇಲಾಖೆ ಪೈಲಟ್ ತರಬೇತಿ ಯೋಜನೆಯಡಿ ಪ್ರತಿ ಅಭ್ಯರ್ಥಿಗೆ 37 ಲಕ್ಷ ರೂ.ಗಳನ್ನು ವ್ಯಯಿಸಲಿದ್ದು, 16-06- 2022ರ ಜೂನ್‌ 16ರಂದು ಕಾರ್ಮಿಕ ಸಚಿವರು ಹಾಗೂ ಮಂಡಳಿ ಅಧ್ಯಕ್ಷರೂ ಆಗಿರುವ ಶಿವರಾಂ ಹೆಬ್ಬಾರ್ ನೇತೃತ್ವದಲ್ಲಿ ನಡೆದ 36ನೇ ಮಂಡಳಿ ಸಭೆಯಲ್ಲಿ 2022-23ನೇ ಸಾಲಿನಲ್ಲಿ 70 ಕೋಟಿ ರೂ. ವ್ಯಯಿಸಲು ನಿರ್ಣಯಕೈಗೊಳ್ಳಲಾಯಿತು.
ಈ ನಿರ್ಣಯಕ್ಕೆ ಪ್ರತಿಯಾಗಿ ಜಕ್ಕೂರು ವೈಮಾನಿಕ ತರಬೇತಿ ಸಂಸ್ಥೆಯೊಂದಿಗಿನ ಸತತ ಸಂಪರ್ಕದಿಂದ ತರಬೇತಿ ಆಗು-ಹೋಗುಗಳ ಬಗ್ಗೆ ಮಾಹಿತಿ ಪಡೆದು ಯೋಜನೆ ಜಾರಿಗೆ ಇಲಾಖೆ ಮುಂದಾಯಿತು.

ಸವಾಲಾದ ಆಯ್ಕೆ

ಪೈಲೆಟ್ ತರಬೇತಿ ಸಂಪೂರ್ಣ ತಾಂತ್ರಿಕ ವಿಷಯವಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆಯನ್ನು ಜಕ್ಕೂರು ತರಬೇತಿ ಸಂಸ್ಥೆಯ ಹೆಗಲಿಗೆ ವಹಿಸಲಾಯಿತು. ಕಳೆದ 2022ರ ನವೆಂಬರ್‌ನಲ್ಲಿ ಪೈಲಟ್ ತರಬೇತಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಯಿತು.

ಪೈಲಟ್ ತರಬೇತಿಗೆ ಶ್ರಮಿಕ ವರ್ಗದಿಂದ ವ್ಯಕ್ತವಾದ ಪ್ರತಿಕ್ರಿಯೆ ಇಲಾಖೆಗೆ ಸವಾಲಾಗಿ ಪರಿಣಮಿಸಿತು. ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆ ಲಾಭ ಪಡೆಯಲು ಒಟ್ಟಾರೆ 1858 ಅರ್ಜಿಗಳು ಸಲ್ಲಿಕೆಯಾದವು. ಈ ಅರ್ಜಿಗಳ ಪೈಕಿ 1573 ಅರ್ಜಿಗಳು ಕ್ರಮಬದ್ಧವಾಗಿದ್ದವು. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗೆ ಇನ್ನಷ್ಟು ಅಗತ್ಯ ಮಾನದಂಡಗಳನ್ನು ಅನುಸರಿಸಲು ನಿರ್ಧರಿಸಲಾಯಿತು.

ಈ ಯೋಜನೆಯಡಿ ಇಡೀ ರಾಜ್ಯಕ್ಕೆ ಪ್ರಾಶಸ್ತ್ಯ ನೀಡುವ ಉದ್ದೇಶದ ಜತೆಗೆ ಯಾವುದೇ ಲಾಬಿಗೆ ಮಣಿಯದೆ ಸಮಾನ ಅವಕಾಶ ನೀಡುವ ಸಲುವಾಗಿ ವಿಭಾಗವಾರು ವಿಂಗಡಣೆ ಮಾಡುವ ಮೂಲಕ 41 ವಿಭಾಗಗಳನ್ನು ಪ್ರತ್ಯೇಕಿಸಿ ಪ್ರತಿ ವಿಭಾಗದಿಂದ ಎರಡು ಅರ್ಜಿಗಳನ್ನು ಪರಾಮರ್ಶಿಸಿ ಆಯ್ಕೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಹೊಂದಿರುವ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ 17 ಮಂದಿಯನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಇನ್ನಷ್ಟು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಪ್ರಸ್ತುತ ಆಯ್ಕೆ ಆಗಿರುವ ಅಭ್ಯರ್ಥಿಗಳ ಪೈಕಿ ಮೂರು ಮಹಿಳಾ ಅಭ್ಯರ್ಥಿಗಳೂ ಇದ್ದಾರೆ.

ಒಟ್ಟಾರೆ ಎರಡು ವರ್ಷಗಳ ತರಬೇತಿಯ ನಂತರ ಅಭ್ಯರ್ಥಿಗಳು ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆಯಲಿದ್ದು, ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | H3N2 Virus: ಎಚ್‌3ಎನ್‌2 ವೈರಸ್‌ನ ಮೂಲ ಪತ್ತೆಗಾಗಿ ಕ್ಲಿನಿಕಲ್ ಆಡಿಟ್‌ಗೆ ಮುಂದಾದ ಆರೋಗ್ಯ ಇಲಾಖೆ

ಶ್ರಮಿಕ ವರ್ಗ ಮಾತ್ರವಲ್ಲದೆ ಅವರ ಅವಲಂಬಿತರ ಬದುಕನ್ನು ಹಸನಾಗಿಸಬೇಕೆಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಮೊಟ್ಟ ಮೊದಲ ಬಾರಿಗೆ ವಸತಿ ಯೋಜನೆ ಜತೆಗೆ ಕಾರ್ಮಿಕ ಮಕ್ಕಳಿಗೆ ಉನ್ನತ ಶಿಕ್ಷಣದ ತರಬೇತಿ ಒದಗಿಸಲಾಗುತ್ತಿದೆ. ಇದೀಗ ಶ್ರಮಿಕ ವರ್ಗದ ಅವಲಂಬಿತರನ್ನು ವೈಮಾನಿಕ ಕ್ಷೇತ್ರಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡಲಾಗಿದೆ.
| ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು ಮತ್ತು ಅಧ್ಯಕ್ಷರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

Exit mobile version