Site icon Vistara News

Contractors Association: ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಗುತ್ತಿಗೆದಾರರ ಸಂಘ

BBMP Office

BBMP Prohibits Animal Slaughter, Meat Sale On Ganesh Chaturthi

ಬೆಂಗಳೂರು: ಬಾಕಿ ಬಿಲ್‌ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲು ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಸಂಘ ಆಗ್ರಹಿಸಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿ ಅಕ್ರಮಗಳ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ತನಿಖಾ ಸಮಿತಿಗಳನ್ನು ರಚನೆ ಮಾಡಿರುವ ಹಿನ್ನೆಲೆಯಲ್ಲಿ ಬಾಕಿ ಬಿಲ್‌ ತಡೆಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರಿಂದಲೇ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಗುತ್ತಿಗೆದಾರರ ಸಂಘ (Contractors Association) ಪ್ರಕಟಿಸಿದೆ.

ತನಿಖಾ ಸಮಿಯು ವರದಿ ಸಲ್ಲಿಸುವವರೆಗೂ ಈಗಾಗಲೇ ಬಿಬಿಎಂಪಿ ಅನುದಾನದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್‌ ದಾಖಲಿಸಿ 28 ತಿಂಗಳಿಗಿಂತಲೂ ಅಧಿಕ ಅವಧಿಯಾಗಿರುವ, ಜ್ಯೇಷ್ಠತೆಯ ಆಧಾರದಲ್ಲಿ ಐಒಸಿ ಬಿಡುಗಡೆಯಾಗಿದ್ದರೂ ಕಳೆದ 3 ತಿಂಗಳಿಂದ ಪಾವತಿ ತಡೆಹಿಡಿಯಲಾಗಿದ್ದ ಕಾಮಗಾರಿಗಳಿಗೆ ಬಿಲ್‌ ಪಾವತಿಯಾಗುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಗುತ್ತಿಗೆದಾರರ ಹಿತದೃಷ್ಟಿಯಿಂದ ಆ.7ರಿಂದ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಲು ಗುತ್ತಿಗೆದಾರರಿಗೆ ಸಂಘವು ತಿಳಿಸಿದೆ.

ಇದನ್ನೂ ಓದಿ | Upper Bhadra project : ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಅಲ್ವಂತೆ!; ಕೇಂದ್ರದ ಮೇಲೆ ಡಿ.ಕೆ. ಶಿವಕುಮಾರ್‌ ಕೆಂಡಾಮಂಡಲ

ನಗರದಾದ್ಯಂತ ಅನುಷ್ಠಾನದಲ್ಲಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ತನಿಖಾ ಸಮಿತಿಯು ವರದಿ ಸಲ್ಲಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗುವವರೆಗೂ ಸ್ಥಗಿತಗೊಳಿಸಿರುವ ಯಾವುದೇ ಕಾಮಗಾರಿಗಳನ್ನೂ ಪುನರಾರಂಭಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ಆರ್‌.ಅಂಬಿಕಾಪತಿ ತಿಳಿಸಿದ್ದಾರೆ.

ಬಿಬಿಎಂಪಿ ಕಾಮಗಾರಿ ಅಕ್ರಮಗಳಿಗೆ ತನಿಖೆಯ ಬಾಣ ಬಿಟ್ಟ ಡಿಕೆಶಿ; 4 ತನಿಖಾ ಸಮಿತಿ ರಚನೆಗೆ ಆದೇಶ

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಇತ್ತೀಚೆಗೆ ಡಿಸಿಎಂ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದರ ಬೆನ್ನಲ್ಲೇ 2019-20ರಿಂದ 2022-23ರವರೆಗಿನ ನಡೆದ ಕಾಮಗಾರಿಗಳ ಅಕ್ರಮಗಳ ತನಿಖೆಗೆ ಪ್ರತ್ಯೇಕ 4 ತನಿಖಾ ಸಮಿತಿ ರಚಿಸಿ ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ ಆರೋಪ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಗುಣಮಟ್ಟ ಕಾಪಾಡದಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಕ್ರಮಗಳ ತನಿಖೆಗೆ ಪ್ರತ್ಯೇಕ ತನಿಖಾ ಸಮಿತಿ ರಚನೆ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಒಳಗೊಂಡಂತೆ 4 ತನಿಖಾ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ | Minister Chaluvarayaswamy : ರಾಜ್ಯಪಾಲರಿಗೆ ದೂರು ಫೇಕ್‌ ಎಂದ ಕೃಷಿ ಸಚಿವ; ತನಿಖೆ ಮಾಡೋಣ ಬಿಡಿ ಎಂದ ಡಿಕೆಶಿ

2019-20ರಿಂದ 2022-23ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಓಎಫ್‌ಸಿ ಕೇಬಲ್‌ ಅಳವಡಿಕೆ, ಬೃಹತ್‌ ನೀರಿನ ಕಾಲುವೆ, ಕೆರೆ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅಕ್ರಮಗಳ ತನಿಖೆಗೆ ಆದೇಶ ಹೊರಡಿಸಿದ್ದು, ಅಗತ್ಯ ಬಿದ್ದರೆ ತಜ್ಞರ ಮೂಲಕ ಗುಣಮಟ್ಟದ ಪರೀಕ್ಷೆಗೂ ಸೂಚನೆ ನೀಡಲಾಗಿದೆ.

ತನಿಖಾ ಸಮಿತಿಗಳು

1. ಘನಾತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ
ಉಜ್ವಲ್ ಕುಮಾರ್ ಘೋಷ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ

2.ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆಯ ಅಕ್ರಮ ತನಿಖಾ ಸಮಿತಿ
ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದ 6 ಸದಸ್ಯರ ಸಮಿತಿ

3.ಬೃಹತ್ ನೀರುಗಾಲುವೆ, ಸ್ವಾಧೀನಾನುಭವ (ಒಸಿ) ನೀಡುವ ಅಕ್ರಮದ ತನಿಖಾ ಸಮಿತಿ
ಪಿ.ಸಿ. ಜಾಫರ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ

4.ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿ
ಡಾ.ವಿಶಾಲ್ ನೇತೃತ್ವದ 6 ಸದಸ್ಯರ ಸಮಿತಿ

Exit mobile version