| ವಿಶ್ವಕುಮಾರ್, ಯಾದಗಿರಿ
ಮಳೆಯಿಂದ ಮನೆ ಗೋಡೆ ಕುಸಿದಿದ್ದರಿಂದ ಜಿಲ್ಲೆಯಲ್ಲಿ ಕುಟುಂಬವೊಂದು ನಿರಾಶ್ರಿತವಾಗಿದೆ. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದಂತಹ ಕುಟುಂಬಸ್ಥರು ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ 6 ಕಿ.ಮೀ ದೂರ ಹೋಗಿ ಮಲಗುವ ಪರಿಸ್ಥಿತಿ ಇದ್ದು, ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ನಿವಾಸಿ ದೇವೇಂದ್ರಮ್ಮ, ಇಬ್ಬರು ಸಹೋದರರಾದ ಚನ್ನಪ್ಪ ಹಾಗೂ ಯಲ್ಲಪ್ಪ ಅವರ ನೋವಿನ ಕತೆ ಇದಾಗಿದೆ. ಇವರ ಮನೆಗೋಡೆ ಕುಸಿದಿದ್ದರೂ ಈಗ ಶಿಥಿಲಗೊಂಡ ಮನೆಯ ಚಿಕ್ಕ ಕೋಣೆಯಲ್ಲಿಯೇ ವಾಸವಾಗಿದ್ದಾರೆ. ಅದೂ ಯಾವಾಗ ಕುಸಿಯಲಿದೆ ಎಂಬುದು ಗೊತ್ತಿಲ್ಲ ಎನ್ನುವ ಪರಿಸ್ಥಿತಿ ಇದೆ. ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡ ದೇವೇಂದ್ರಮ್ಮ ಕೂಲಿ ನಾಲಿ ಮಾಡಿಕೊಂಡು ಇಬ್ಬರು ಸಹೋದರರನ್ನು ಪೋಷಿಸಿದ್ದರು. ಈಗಲೂ ತಮ್ಮಂದಿರ ಜತೆ ಜೀವನ ಸಾಗಿಸುತ್ತಿದ್ದು, ಅಗತ್ಯವಾಗಿರುವ ಸೂರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | Nirman 2 | ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ; ಮನೆ ನಿರ್ಮಾಣ ಪರವಾನಗಿಗೆ ಪರದಾಟ
ಕಳೆದ ವರ್ಷ ಮಳೆಯಿಂದ ಮನೆ ಗೋಡೆ ಕುಸಿದಿದ್ದರಿಂದ ಸೂರಿಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದು, ಇರುವ ಮನೆಯ ಚಾವಣಿ ಕೂಡ ಯಾವಾಗ ಬಿದ್ದು ಹೋಗುತ್ತದೋ ಎಂಬ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ಘೋಷಣೆಯಾಗಿತ್ತು. ಆದರೆ, ಇವರಿಗೆ ಒಂದೇ ಒಂದು ರೂಪಾಯಿ ಕೂಡ ಪರಿಹಾರ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಗೋಡೆ ಬಿದ್ದು ಮನೆ ವಾಸಯೋಗ್ಯವಾಗಿಲ್ಲ. ಈಗ ಮತ್ತೆ ಮಳೆಗಾಲದಲ್ಲಿ ಮನೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಕೂಲಿಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಳೆ ನೀರು ಹೊರ ಹಾಕುವುದೇ ಇವರಿಗೆ ದೊಡ್ಡ ಕೆಲಸವಾಗಿದೆ. ಸೂರಿಲ್ಲದ ಕಾರಣ ಇವರು ಹಾಲಗೇರಾ ಗ್ರಾಮದಿಂದ 6 ಕಿಮೀ ದೂರದ ವಡಗೇರಾ ಪಟ್ಟಣಕ್ಕೆ ಹೋಗಿ ರಾತ್ರಿ ವಾಸ್ತವ್ಯ ಮಾಡುತ್ತಿದ್ದಾರೆ.
ಮದುವೆಗೂ ಶಾಪವಾದ ಬಡತನ
ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿರುವ ದೇವೇಂದ್ರಮ್ಮ ತಾವು ಮದುವೆಯಾಗದೆ, ಕಷ್ಟಪಟ್ಟು ಇಬ್ಬರು ಸಹೊದರರನ್ನು ಬೆಳೆಸಿದ್ದಾರೆ. ವಯಸ್ಸಿಗೆ ಬಂದ ಸಹೋದರರಿಗೆ ಮದುವೆ ಮಾಡಿಕೊಟ್ಟು ಅವರಿಗೆ ಒಂದು ಜೀವನ ರೂಪಿಸಬೇಕು ಎಂದು ಪರಿತಪಿಸುತ್ತಿದ್ದಾರೆ. ತಮ್ಮಂದಿರಿಗೆ ಮದುವೆ ಮಾಡಲು ಹುಡಗಿ ಕೊಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ. ಆದರೆ, ಮೂಲ ಸೌಕರ್ಯಗಳಲ್ಲಿ ಒಂದಾದ ಸೂರೇ ಇಲ್ಲವಾದರೆ ಹೇಗೆ ಎಂಬ ಪ್ರಶ್ನೆಯೂ ಎದುರಾಗಿದೆ. ಸರ್ಕಾರ ಇಲ್ಲವೇ ದಾನಿಗಳು ಇವರ ಸಹಾಯಕ್ಕೆ ಬಂದು ಸೂರು ಕಲ್ಪಿಸಲು ನೆರವಾಗಬೇಕಿದೆ.
ಇದನ್ನೂ ಓದಿ | ಹೆತ್ತ ಕುಡಿಯನ್ನು ಬಡತನಕ್ಕೆ ಹೆದರಿ ಬೀದಿಗೆ ಬಿಟ್ಟಳು, ಕರುಳಿನ ಕೂಗಿಗೆ ಮರುಗಿ ಮತ್ತೆ ಓಡಿ ಬಂದಳು!