Site icon Vistara News

Disproportionate Assets: ಅಕ್ರಮ ಆಸ್ತಿ ಗಳಿಕೆ‌ ಪ್ರಕರಣ;‌ ಸಿಬಿಐ ತನಿಖೆಯಿಂದ ಡಿ.ಕೆ.ಶಿವಕುಮಾರ್‌ಗೆ ರಿಲೀಫ್

yuva kranti DK Shivakumar speech

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ‌ ಪ್ರಕರಣದಲ್ಲಿ (Disproportionate Assets) ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್‌ಗೆ ರಿಲೀಫ್‌ ಸಿಕ್ಕಿದೆ. ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಶುಕ್ರವಾರ ನಡೆದಿದ್ದು, ಫೆ.24 ರವರೆಗೆ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಲಾಗಿದೆ. ಇದೇ ವೇಳೆ ತನಿಖಾ ಪ್ರಗತಿ ವರದಿ ಸಲ್ಲಿಸಲು (ಫೆ.24ಕ್ಕೆ) ಸಿಬಿಐಗೆ ಹೈಕೊರ್ಟ್‌ ಸೂಚಿಸಿದೆ.

ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಡಿ.ಕೆ.ಶಿವಕುಮಾರ್ ಪರವಾಗಿ ಹಿರಿಯ ವಕೀಲ ಸಿ.ಎಚ್.ಜಾದವ್ ವಾದ ಮಂಡಿಸಿದರು. ಸಿಬಿಐ ಪರವಾಗಿ ವಕೀಲ ಪ್ರಸನ್ನ ಕುಮಾರ್ ಹಾಜರಿದ್ದರು.

1989 ರಿಂದ ಹಲವು ಬಾರಿ ಡಿ.ಕೆ.ಶಿವಕುಮಾರ್ ಶಾಸಕರಾಗಿದ್ದು, ಸಚಿವರಾಗಿ ಕೆಲಸ‌ ಮಾಡಿದ್ದಾರೆ. ಅವರಿಗೆ ಹಲವು ವಿರೋಧಿಗಳಿದ್ದಾರೆ. ಡಿಕೆಶಿ ವಿರುದ್ಧ ನಾಲ್ಕು ಆದಾಯ ತೆರಿಗೆ ವಂಚನೆ ಪ್ರಕರಣ ದಾಖಲಾಗಿದ್ದವು. ನಾಲ್ಕರ ಪೈಕಿ ಮೂರು ಪ್ರಕರಣಗಳು ವಜಾ ಆಗಿವೆ. ಸೆಷನ್ಸ್ ಕೋರ್ಟ್‌ನಲ್ಲಿ ಆರೋಪ ಮುಕ್ತರಾಗಿದ್ದಾರೆ. ಉಳಿದ ಒಂದು ಪ್ರಕರಣ ಏನಾಗಿದೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಕೆಶಿ ಪರ ವಕೀಲ, ಉಳಿದ ಒಂದು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | High court : 20 ವರ್ಷದಿಂದ ಅಕ್ರಮವಾಗಿ ಭಾರತದಲ್ಲಿದ್ದ ಮಾತ್ರಕ್ಕೆ ಬಾಂಗ್ಲಾದೇಶದ ಪ್ರಜೆ ಭಾರತೀಯ ಆಗುವುದಿಲ್ಲ ಎಂದ ಕೋರ್ಟ್‌

ಆದಾಯ ತೆರಗೆ ಇಲಾಖೆಯಿಂದ ದಾಖಲಾಗಿದ್ದ ಕೇಸ್‌ಗಳ ಮಾಹಿತಿಯನ್ನು ನ್ಯಾಯಮೂರ್ತಿ ಕೇಳಿದರು. ಈ ವೇಳೆ ಜಾರಿ ನಿರ್ದೇಶನಾಲಯದಲ್ಲಿಯೂ ಮೂರು ಪ್ರಕರಣಗಳು ಬಾಕಿ ಇವೆ ಎಂದು ಡಿಕೆಶಿ ವಕೀಲರು ಮಾಹಿತಿ ನೀಡುತ್ತಾ, 2019ರ ಸೆಪ್ಟೆಂಬರ್‌ 9ರಂದು ಡಿಕೆಶಿ ಪರವಾಗಿ ಲೆಕ್ಕವಿಲ್ಲದ ಹಣ ಪತ್ತೆಯಾಗಿರುವುದಾಗಿ ರಾಜ್ಯ ಸರ್ಕಾರಕ್ಕೆ ಇ.ಡಿ ಪತ್ರ ಬರೆದಿತ್ತು. ಆ ಪತ್ರ ಆಧರಿಸಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ರಾಜ್ಯ ಸರ್ಕಾರದ ಮನವಿ ಆಧರಿಸಿ ಸಿಬಿಐ ಭ್ರಷ್ಟಾಚಾರ ಆರೋಪದ ಅಡಿ ತನಿಖೆ‌ ಆರಂಭಿಸಿದೆ. ಶೇ. 44 ಹೆಚ್ಚುವರಿ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಎಫ್ಐಆರ್ ದಾಖಲಿಸಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದರು.

ಸಿಬಿಐ ತನಿಖೆ‌ ವೈಖರಿ‌ ಪ್ರಶ್ನಿಸಿದ ಡಿಕೆಶಿ ಪರ‌ ವಕೀಲ

ಡಿಕೆಶಿ ಮತ್ತು ಅವರ ಕುಟುಂಬದವರ ಆಸ್ತಿಯ ತನಿಖೆ ‌ನಡೆಯುತ್ತಿದೆ. ಆದರೆ, ದೂರು ಡಿಕೆಶಿ ವಿರುದ್ಧ ಇದ್ದರೂ ಕುಟುಂಬದ ಸದಸ್ಯರ ವಿರುದ್ಧವೂ ತನಿಖೆ ನಡೆಯುತ್ತಿದೆ. ಸಿಬಿಐ ಕಾನೂನಿಗೆ ವಿರುದ್ಧವಾಗಿ ದೂರು ದಾಖಲಿಸಿದೆ. ಹಿರಿಯ ಅಧಿಕಾರಿಗಳು ದೂರು‌ ಪರಿಶೀಲಿಸಿ ನಂತರ ಎಫ್ಐಆರ್ ದಾಖಲಿಸಬೇಕು. ಆದರೆ, ಪ್ರಕ್ರಿಯೆ ಪಾಲಿಸದೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಡಿಕೆಶಿ ಪರ ವಕೀಲ ಜಾದವ್ ಸಿಬಿಐ ತನಿಖೆ ವೈಖರಿಯನ್ನು ಪ್ರಶ್ನಿಸಿದರು.

ಐಟಿ‌ ಅಥವಾ ಇಡಿಯಿಂದ‌ ಮಾಹಿತಿ ‌ಬಂದ ನಂತರವೂ ಪರಿಶೀಲನೆ ಅಗತ್ಯ ಇದೆಯೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ವಕೀಲ ಸ್ಪಂದಿಸಿ, ಡಿ.ಕೆ.ಶಿವಕುಮಾರ್ ‌ಕೆಪಿಸಿಸಿ ಅಧ್ಯಕ್ಷರು ಆಗಿದ್ದಾರೆ. ಚುನಾವಣೆ ವೇಳೆ‌ ಕಿರುಕುಳ ನೀಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಹೇಳಿದರು. 2019ರಲ್ಲಿ ಪ್ರಕರಣ ದಾಖಲಾಗಿದೆ. ಹೀಗಿದ್ದಲ್ಲಿ‌ ಚುನಾವಣಾ ಉದ್ದೇಶದಿಂದ‌ ಕಿರುಕುಳ ಹೇಗಾಗುತ್ತದೆ, ನೋಟಿಸ್‌ ಪ್ರಶ್ನಿಸಿ ನೀವು ಬೇಕಾದರೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ | BBMP Reforms: ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಜಾರಿ ಕೋಶ ರಚಿಸಿ: ಆಡಳಿತ ಸುಧಾರಣಾ ಆಯೋಗದ ಶಿಫಾರಸು

ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಆರೋಪಿತರ ಕುಟುಂಬಸ್ಥರ ವಿಚಾರಣೆಗೆ ಅವಕಾಶ ಇದೆ. ಈ ಸಂದರ್ಭದಲ್ಲಿ ಪ್ರಕರಣದ ತನಿಖೆ ‌ಯಾವ ಹಂತದಲ್ಲಿ ಇದೆ ಎಂದು ಜಡ್ಜ್‌ ಕೇಳಿದರು. ಇದಕ್ಕೆ ತನಿಖಾಧಿಕಾರಿಯನ್ನು ಕೇಳಿ ಹೇಳಬೇಕು. ಅಂತಿಮ‌ ವರದಿ ಸಲ್ಲಿಸಲು ಕನಿಷ್ಠ ‌ಇನ್ನೂ ಆರು ತಿಂಗಳು ಬೇಕು ಎಂದು ವಕೀಲ ಹೇಳಿದಾಗ, ತನಿಖೆಯ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್‌ ಸೂಚಿಸಿತು. ಮುಂದಿನ ವಿಚಾರಣೆ ವೇಳೆ ಪ್ರಗತಿ ವರದಿ ಸಲ್ಲಿಸಲಾಗುವುದು ಎಂದು ವಕೀಲರು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಏನು ತನಿಖೆ ಮಾಡಿದ್ದೀರಿ ಎಂಬ ನ್ಯಾಯಮೂರ್ತಿ ಪ್ರಶ್ನೆಗೆ ಸಿಬಿಐ ಪರ ವಕೀಲ ಸ್ಪಂದಿಸಿ, ಡಿಕೆಶಿ ಪುತ್ರಿಗೆ ಸಿಬಿಐ ನೋಟಿಸ್ ನೀಡಿಯೇ ಇಲ್ಲ. ಅವರ ಕಾಲೇಜಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಬಳಿಕ ಪ್ರಕರಣದಲ್ಲಿ ವಾದ, ಪ್ರತಿವಾದ ಆಲಿಸಿದ ಬಲಿಕ ಫೆ.24 ರವರೆಗೂ ತನಿಖೆ‌ ನಡೆಸದಂತೆ ಮಧ್ಯಂತರ ತಡೆ ನೀಡಿ, ಫೆ.24ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಸಿಬಿಐಗೆ ನ್ಯಾಯಮೂರ್ತಿ ಸೂಚಿಸಿದರು.

Exit mobile version