Site icon Vistara News

ಸುಟ್ಟ ಗಾಯದಿಂದ ಮಗು ನರಳುತ್ತಿದ್ದರೂ ಕೇರ್‌ ಮಾಡದ ಡಾಕ್ಟರ್ಸ್‌!

Doctors care less

ಚಿತ್ರದುರ್ಗ: ಮೋಹರಂ ಹಬ್ಬ (Muharram) ಹಿನ್ನೆಲೆ ಪುಟ್ಟ ಮಗು ಜತೆ ಕೊಂಡ ಹಾಯುವಾಗ ಕಾಲು ಜಾರಿ ವ್ಯಕ್ತಿಯೊಬ್ಬರು ಕೆಂಡದ ಹೊಂಡಕ್ಕೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ (Tragedy in chithradurga) ನಡೆದಿತ್ತು. ಸುಟ್ಟ ಗಾಯಗಳಿಂದ ನರಳುತ್ತಿದ್ದ ಇಬ್ಬರನ್ನೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡದೇ ಅಮಾನವೀಯ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ರಮೇಶ್‌ ಹಾಗೂ ರವಿ

ಚಿತ್ರದುರ್ಗದ (Chitraduraga News) ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮೋಹರಂ ಹಬ್ಬದಲ್ಲಿ (Muharram 2023) ಪುಟ್ಟ ಮಗು ಹಿಡಿದು ಕೊಂಡ ಹಾಯುವಾಗ ರಮೇಶ್‌ ಎಂಬುವವರು ಕಾಲು ಜಾರಿ ಬಿದ್ದಿದ್ದರು. ಕೂಡಲೇ ಅಲ್ಲಿದ್ದವರು ರಮೇಶ್‌ ಹಾಗೂ ಮಗುವನ್ನು ಮೇಲೆ ಎತ್ತಿದ್ದಾರೆ.

ನಿಗಿ ನಿಗಿ ಕೆಂಡದ ಮೇಲೆ ಬಿದ್ದ ಕಾರಣದಿಂದಾಗಿ ರಮೇಶ್(38) ಹಾಗೂ 2 ವರ್ಷದ ಮಗು ರವಿಗೆ ಶೇ. 25ರಷ್ಟು ಸುಟ್ಟ ಗಾಯವಾಗಿದೆ. ಬೆಳಗ್ಗೆ 6 ಗಂಟೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಯಾವೊಬ್ಬ ವೈದ್ಯರು, ಸಿಬ್ಬಂದಿಯು ಪ್ರಥಮ ಚಿಕಿತ್ಸೆಯನ್ನು ನೀಡಿಲ್ಲ. ಬದಲಿಗೆ ಕುಟುಂಬಸ್ಥರಿಂದಲೇ ಮಗುವಿಗೆ ಡ್ರೆಸ್ಸಿಂಗ್ ಮಾಡಿಸಿದ್ದಾರೆ.

ಡ್ಯೂಟಿ ಡಾಕ್ಟರ್‌ ನಾಪತ್ತೆ

ಇತ್ತ ಬೆಳಗ್ಗೆ ಇರಬೇಕಾಗಿದ್ದ ಡ್ಯೂಟಿ ಡಾಕ್ಟರ್‌ ಬಯೋಮೆಟ್ರಿಕ್‌ನಲ್ಲಿ ಪಂಚ್‌ ಮಾಡಿ ಆಸ್ಪತ್ರೆಯಿಂದ ಪರಾರಿ ಆಗಿದ್ದಾರೆ. ದಿನನಿತ್ಯ ಎಲ್ಲಾ ಡಾಕ್ಟರ್‌ಗಳ ಕತೆ ಇಷ್ಟೇ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಸಮಯಕ್ಕೆ ಸರಿಯಾಗಿ ಯಾವ ವೈದ್ಯರು ಬರುವುದಿಲ್ಲ, ಬದಲಾಗಿ ಎಲ್ಲರೂ ಅವರವರ ಖಾಸಗಿ ಕ್ಲಿನಿಕ್‌ನಲ್ಲಿ ಇರುತ್ತಾರೆ. ಇನ್ನು ಕೆಲವರು ಆಸ್ಪತ್ರೆಗೆ ಬಂದು ಬಯೋಮೆಟ್ರಿಕ್ ಹಾಕಿ ಮನೆಗೆ ಹೋಗುತ್ತಾರೆ ಎಂದು ಜನರು ಆರೋಪಿಸಿದ್ದಾರೆ.

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಗಾಯಾಳುಗಳು ನರಳಾಡುತ್ತಿರುವುದನ್ನು ವಿಸ್ತಾರ ನ್ಯೂಸ್‌ ಸುದ್ದಿ ಮಾಡಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಸ್ಪತ್ರೆ ವೈದ್ಯರು ಕೊನೆಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಇಬ್ಬರು ಡಾಕ್ಟರ್ಸ್‌ ಸಸ್ಪೆಂಡ್!

ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಲ್ಲಾ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋನ್ ಸ್ವಿಚ್ ಆಫ್ ಮಾಡಿ ಡ್ಯೂಟಿ ಟೈಮ್‌ನಲ್ಲಿ ಎಲ್ಲಿಗೆ ಹೋಗುತ್ತೀರಿ ಎಂದು ಗರಂ ಆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಸುಧಾಕರ್‌, ಮಗುವಿನ ಜೀವಕ್ಕೆ ಏನು ಆಗಿಲ್ಲ. ಕೆಂಡ ತುಳಿಯುವ ವೇಳೆ ಅವಘಡ ಆಗಿದೆ. ಇಲ್ಲಿನ ವೈದ್ಯರು ಹಾಗೂ ಡಿಎಸ್ ನಿರ್ಲಕ್ಷ್ಯ ತೋರಿಸಿದ್ದಾರೆ. ಕೂಡಲೇ ಆರೋಗ್ಯ ಸಚಿವರ ಜತೆ ಮಾತಾಡಿ ಅವರನ್ನು ಸಸ್ಪೆಂಡ್ ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version