ಚಿಕ್ಕಮಗಳೂರು: ಭಾನುವಾರ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆ ರಾಜ್ಯಾದ್ಯಂತ ಭಾರಿ ಅನಾಹುತಗಳನ್ನು ಸೃಷ್ಟಿಸಿದೆ. ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಅಂಡರ್‌ಪಾಸ್‌ನಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿಕೊಂಡು ಒಬ್ಬ ಯುವತಿ ಪ್ರಾಣ ಕಳೆದುಕೊಂಡಿದ್ದರೆ ಇತ್ತ ಮೂಡಿಗೆರೆಯಲ್ಲಿ ಸ್ಕೂಟರ್ ಮೇಲೆ ಮರ ಬಿದ್ದಿದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೃತಪಟ್ಟ ಯುವತಿಯನ್ನು ವಿಜಯವಾಡ ಮೂಲದ ಇನ್ಫೋಸಿಸ್ ಉದ್ಯೋಗಿ ಬಾನುರೇಖಾ (22) ಎಂದು ಗುರುತಿಸಲಾಗಿದ್ದರೆ, ಮೂಡಿಗೆರೆಯ ಚಿಕ್ಕಹಳ್ಳ ಬಳಿ ನಡೆದ ದುರಂತದಲ್ಲಿ ಮೃತಪಟ್ಟವರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ.
ಮೂಡಿಗೆರೆಯಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗುತ್ತಿದ್ದಾಗ ವೇಣುಗೋಪಾಲ್ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಮೂರು ಮರಗಳು ಬಿದ್ದಿವೆ, ಹೀಗಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಇದನ್ನೂ ಓದಿ | Weather Report: ಬೆಂಗಳೂರಲ್ಲಿ ಬಿರುಗಾಳಿ ಮಳೆ; ಅಂಡರ್‌ಪಾಸ್‌ನಡಿ ಸಿಲುಕಿ ಮಹಿಳೆ ಸಾವು, ಐವರು ಪಾರು
ಚಿಕ್ಕಹಳ್ಳ ಗ್ರಾಮದಲ್ಲಿ ವೇಣುಗೋಪಾಲ್ ಹೋಂ ಸ್ಟೇ ನಡೆಸುತ್ತಿದ್ದರು. ಹೋಂ ಸ್ಟೇ ಇದ್ದ ತುಸು ದೂರದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ದುರಂತ ನಡೆದಿದೆ. ಮೂಲತಃ ಉತ್ತರ ಕರ್ನಾಟಕ ಮೂಲದ ವೇಣುಗೋಪಾಲ್, ಮೂಡಿಗೆರೆಯಲ್ಲಿ ಮದುವೆಯಾಗಿ ಚಿಕ್ಕಹಳ್ಳ ಗ್ರಾಮದಲ್ಲಿ ವಾಸವಿದ್ದರು. ಇವರು ಹೋಂ ಸ್ಟೇ ಜತೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿದ್ದರು.