Site icon Vistara News

Rain News | ಹವಾಮಾನ ವೈಪರೀತ್ಯ; ಮೀನುಗಾರಿಕೆ ಶುರುವಾಗದೆ ಕಡಲ ಮಕ್ಕಳು ಅತಂತ್ರ

Rain News

ಎಸ್.ಎಸ್.ಸಂದೀಪ ಸಾಗರ, ಕಾರವಾರ
ಕರಾವಳಿಯಲ್ಲಿ ರಾಜ್ಯ ಸರ್ಕಾರದ ನಿಯಮದಂತೆ ಮೀನುಗಾರಿಕೆ ಮೇಲಿನ ನಿಷೇಧ ಅವಧಿ ಮುಕ್ತಾಯವಾಗಿದೆ. ಮೀನುಗಾರರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟ್, ಬಲೆಗಳ ರಿಪೇರಿ ಮಾಡಿಸಿಕೊಂಡು ಮೀನುಗಾರಿಕೆಗೆ ಇಳಿಯಲು ಸಿದ್ಧರಾಗಿದ್ದರು. ಆದರೆ ವರುಣನ (Rain News) ಅಬ್ಬರದಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆ ಅವಧಿ ಆರಂಭವಾದ ಬೆನ್ನಲ್ಲೇ ಸ್ಥಗಿತಗೊಂಡಿದೆ.

ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೀಗ ಕರಾವಳಿಯಲ್ಲಿ ಮೀನುಗಾರಿಕೆ ಸುಗ್ಗಿ ಆರಂಭವಾಗಬೇಕಿತ್ತು. ಬೋಟುಗಳು ಆಳ ಸಮುದ್ರಕ್ಕೆ ತೆರಳಿ ಮೀನುಗಳನ್ನು ಹೊತ್ತು ಆಗಮಿಸಬೇಕಿತ್ತು. ಆದರೆ, ಹವಾಮಾನ ಇಲಾಖೆ ಆಗಸ್ಟ್ 11ರವರೆಗೆ ಭಾರಿ ಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲೇ ನೂರಾರು ಮೀನುಗಾರಿಕಾ ಬೋಟುಗಳು ಲಂಗರು ಹಾಕಿ ನಿಂತಿವೆ.

ನಿಷೇಧ ಅವಧಿ ಮುಗಿದರೂ ಪ್ರಾರಂಭವಾಗದ ಮೀನುಗಾರಿಕೆ
ಜೂನ್ ಹಾಗೂ ಜುಲೈ ತಿಂಗಳ 61 ದಿನಗಳ ನಿಷೇಧ ಅವಧಿ ಬಳಿಕ ಸಂಪ್ರದಾಯದಂತೆ ಆಗಸ್ಟ್ 1ರಿಂದ ಮೀನುಗಾರಿಕೆ ಪ್ರಾರಂಭವಾಗುತ್ತದೆ. ಅದರಂತೆ ಈ ಬಾರಿ ಕಾರವಾರದ ಮೀನುಗಾರರು ಮೀನುಗಾರಿಕೆಯನ್ನು ಪ್ರಾರಂಭಿಸಿದ್ದರಾದರೂ ಆಗಸ್ಟ್ 2ರಿಂದಲೇ ಮಳೆಯ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂದರಿಗೆ ವಾಪಸಾಗಿದ್ದರು. ಅಂದಿನಿಂದ ಬಂದರಿನಲ್ಲಿ ಲಂಗರು ಹಾಕಿ ನಿಂತಿರುವ ನೂರಾರು ಮೀನುಗಾರಿಕಾ ಬೋಟುಗಳು ಮತ್ತೆ ಕಡಲಿಗಿಳಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ | Ship Sinking | ನೋಡನೋಡುತ್ತಲೇ ಸಂಪೂರ್ಣ ಮುಳುಗಿದ ಬೋಟ್‌! ಮೀನುಗಾರರು ಪಾರು

ಹೀಗಾಗಿ ಜಿಲ್ಲೆಯಷ್ಟೇ ಅಲ್ಲದೇ ನೆರೆಯ ಉಡುಪಿ, ಮಲ್ಪೆ ಸೇರಿ ಗೋವಾ, ತಮಿಳುನಾಡಿನ ಹೊರರಾಜ್ಯದ ಬೋಟುಗಳು ಸಹ ಕಾರವಾರ ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಂತಿವೆ. ಇದರಿಂದ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಬೋಟುಗಳ ಕಾರ್ಮಿಕರಿಗೆ ನಿರಾಸೆಯಾಗಿದೆ. ಕೆಲಸವಿಲ್ಲದೇ ಖಾಲಿ ಕೂರುವಂತಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಮೀನುಗಾರಿಕೆಯೊಂದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಹೀಗೆ ಮೀನುಗಾರಿಕೆ ಸ್ಥಗಿತಗೊಂಡರೆ ದುಡಿಮೆ ಇಲ್ಲದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದಿದ್ದಾರೆ ಮೀನುಗಾರಿಕಾ ಬೋಟಿನ ಕಾರ್ಮಿಕ ಬಾಬು.

ಮೀನುಗಾರಿಕೆಗಾಗಿ ಲಕ್ಷಾಂತರ ರೂಪಾಯಿ ಖರ್ಚು

ಪ್ರತಿವರ್ಷ ಮೀನುಗಾರಿಕಾ ನಿಷೇಧ ಅವಧಿಯಲ್ಲಿ ಬೋಟುಗಳ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟು ಹಾಗೂ ಬಲೆಗಳ ರಿಪೇರಿ ಕಾರ್ಯವನ್ನು ಕೈಗೊಳ್ಳುತ್ತಾರೆ. ಮೀನುಗಾರಿಕೆ ಅವಧಿ ಪ್ರಾರಂಭವಾದ ಬಳಿಕ ಉತ್ತಮ ಮೀನುಗಾರಿಕೆಯಾದಲ್ಲಿ ಸಾಲ ತೀರಿಸಿ ಲಾಭವಾಗುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಮಳೆಯ ಕಾರಣದಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿದ್ದು ಲಾಭಕ್ಕಿಂತ ನಷ್ಟವನ್ನೇ ಹೆಚ್ಚು ತಂದೊಡ್ಡಿದೆ.

ಬೋಟುಗಳು ಬಂದರಿನಲ್ಲೇ ನಿಂತಿದ್ದರೂ ಕಾರ್ಮಿಕರಿಗೆ ವೇತನ ನೀಡಲೇಬೇಕಿದೆ. ಮೀನುಗಾರಿಕೆ ನಡೆಯದಿದ್ದಲ್ಲಿ ಮಾಲೀಕರಿಗೆ ಸಾಕಷ್ಟು ನಷ್ಟ ಉಂಟಾಗಲಿದೆ. ಕಳೆದ ಬಾರಿ ಸಹ ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ಮೀನುಗಾರರು ನಷ್ಟ ಅನುಭವಿಸುವಂತಾಗಿತ್ತು. ಇದೀಗ ಮತ್ತೆ ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟ ಎದುರಾಗಿದ್ದು, ಸರ್ಕಾರ ಮೀನುಗಾರರಿಗೆ ನೆರವು ನೀಡಬೇಕು ಎಂದು ಬೋಟು ಮಾಲೀಕರು ಮನವಿ ಮಾಡಿದ್ದಾರೆ.

ಕಾಲಿಕ ಮಳೆಯಿಂದ ರೈತರ ಬೆಳೆ ನಷ್ಟವಾದರೆ, ಸರ್ಕಾರ ಅವರಿಗೆ ಬೆಳೆ ಹಾನಿ ಪರಿಹಾರವನ್ನು ನೀಡುತ್ತದೆ. ಹಾಗೆಯೇ ಮೀನುಗಾರಿಕೆ ನಡೆಯದೇ ನಷ್ಟ ಅನುಭವಿಸುವ ಮೀನುಗಾರರಿಗೂ ಸರ್ಕಾರ ಪರಿಹಾರವನ್ನು ನೀಡಬೇಕು. ಸಾಲ ಮಾಡಿ ಮೀನುಗಾರಿಕೆ ನಡೆಸುವ ಮೀನುಗಾರರು ಸಾಲದ ಹೊರೆಯಲ್ಲಿ ಸಿಲುಕಿ ಮನೆ, ಆಸ್ತಿ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಸುವುದನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದರೂ ಬರಬಹುದು.
– ಸುರೇಶ ತಾಂಡೇಲ, ಬೋಟ್ ಮಾಲೀಕರು, ಬೈತಖೋಲ

ಇದನ್ನೂ ಓದಿ | Rain news| ರಾಮನಗರದಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

Exit mobile version