Site icon Vistara News

ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Girl Child

ಹೆಣ್ಣು ಭ್ರೂಣ ಹತ್ಯೆ ದಂಧೆಯ ಕರಾಳ ವಿವರಗಳು ಒಂದೊಂದಾಗಿ ಬಯಲಾಗುತ್ತಿವೆ. ಇದರಲ್ಲಿ ಪಾಲ್ಗೊಂಡ ಮತ್ತೊಬ್ಬ ಮಹಿಳೆ ಆರೆಸ್ಟ್‌ ಆಗಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಈಕೆ ತಿಂಗಳಿಗೆ 70ಕ್ಕೂ ಹೆಚ್ಚು ಅಬಾರ್ಷನ್‌ ಮಾಡಿಸುತ್ತಿದ್ದಳು. ಅಬಾರ್ಷನ್‌ ಮಾಡಿಸಿದ ಭ್ರೂಣಗಳನ್ನು ನಾನಾ ರೀತಿಯಲ್ಲಿ ಎಸೆಯುತ್ತಿದ್ದಳು. ಭ್ರೂಣಗಳನ್ನು ಪೇಪರ್‌ನಲ್ಲಿ ಸುತ್ತಿ ಲ್ಯಾಬ್‌ ಟೆಕ್ನಿಶಿಯನ್‌ಗೆ ಕೊಡುತ್ತಿದ್ದಳು. ಆತ ಮಗುವನ್ನು ಕಾವೇರಿ ನದಿಯಲ್ಲಿ ಎಸೆದು ಬರುತ್ತಿದ್ದ. ಮೆಡಿಕಲ್‌ ವೇಸ್ಟ್‌ಗೆ ಹಾಕುತ್ತಿದ್ದರು. ಒಮ್ಮೊಮ್ಮೆ ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್‌ ಮಾಡುತ್ತಿದ್ದುದಾಗಿ ವಿಚಾರಣೆಯಲ್ಲಿ ಹೇಳಿದ್ದಾಳೆ. ಒಂದೆರಡು ಪ್ರಕರಣಗಳಲ್ಲಿ 6 ತಿಂಗಳ ಮಕ್ಕಳನ್ನೂ ಗರ್ಭದಿಂದ ಹೊರತೆಗೆದಿದ್ದೇನೆ. ಆರು ತಿಂಗಳ ಮಗುವಿಗೂ ಜೀವ ಇರುತ್ತಿತ್ತು, ಹೊರ ತೆಗೆದ ಕೆಲ ಸಮಯದ ನಂತರ ಸಾಯುತ್ತಿದ್ದವು ಎಂದು ಮಂಜುಳಾ ಹೇಳಿದ್ದಾಳೆ. ಎಂದರೆ ನಿರಂತರವಾಗಿ ಈ ಕೆಲಸ ಮಾಡುತ್ತಿದ್ದ ಇವರಿಗೆ ಯಾವ ಬಗೆಯ ಮಾನವೀಯತೆಯೂ ಇರಲಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.

ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide) ಬೃಹತ್ ಜಾಲದಲ್ಲಿ ಇದುವರೆಗೂ ಆರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ವೇಳೆ, ಆರೋಪಿಗಳು ಎರಡು ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆಗಳನ್ನು ಮಾಡಿದ್ದಾರೆಂಬುದು ಗೊತ್ತಾಗಿದೆ. ಭ್ರೂಣ ಹತ್ಯೆಯ ಈ ಭಾರೀ ಜಾಲ ಇದುವರೆಗೆ ನಡೆಸಿರುವ ಕೃತ್ಯ ಯಾವ ರೀತಿಯಿಂದಲೂ ಕ್ಷಮಾರ್ಹವಲ್ಲ; ನಾಗರಿಕ ಸಮಾಜಕ್ಕೆ ತಕ್ಕುದಾದುದಲ್ಲ. ಈ ಜಾಲದ ಬಗ್ಗೆ ಸಮಗ್ರ ತನಿಕೆಯಾಗಬೇಕು. ಇದರಲ್ಲಿ ಯಾರೆಲ್ಲ ಇದ್ದಾರೋ ಅವರಿಗೆಲ್ಲಾ ವಿಚಾರಣೆ ನಡೆಸಿ ಕಠಿಣ ಶಿಕ್ಷೆಯನ್ನು ನೀಡಬೇಕು.

ಹೆಣ್ಣು ಭ್ರೂಣ ಹತ್ಯೆಯು ಒಂದು ಸಾಮಾಜಿಕ ಪಿಡುಗು. ಇದು ಲಿಂಗ ಅಸಮಾನತೆಯ ಜೊತೆಗೆ ತಳುಕು ಹಾಕಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 90ರ ದಶಕದಲ್ಲಿ 10 ದಶಲಕ್ಷ ಹೆಣ್ಣು ಭ್ರೂಣ ಹತ್ಯೆಗಳು ನಡೆದಿದ್ದವು. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ 5 ಲಕ್ಷ ಅಕ್ರಮ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಭ್ರೂಣ ಹೆಣ್ಣು ಎಂಬ ಏಕೈಕ ಕಾರಣಕ್ಕಾಗಿ ಪ್ರತಿ ವರ್ಷ ಭಾರತದಲ್ಲಿ ಒಂದು ಲಕ್ಷ ಗರ್ಭಪಾತಗಳನ್ನು ಮಾಡಲಾಗುತ್ತದೆ ಎಂಬ ಅಂದಾಜಿದೆ. ಮಧ್ಯ ಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢಗಳಲ್ಲಿ ಈ ಪ್ರಕರಣಗಳು ಹೆಚ್ಚು ಆದರೂ, ಈಗ ಹೊರ ಬಿದ್ದಿರುವ ಮಾಹಿತಿಯನ್ನು ನೋಡುತ್ತಿದ್ದರೆ ಕರ್ನಾಟಕವೂ ಏನೂ ಕಡಿಮೆಯಿಲ್ಲ ಎನ್ನುವಂತಾಗುತ್ತಿದೆ. ಭಾರತ ಎಷ್ಟೇ ಅಭಿವೃದ್ಧಿಯನ್ನು ಸಾಧಿಸಿದ್ದರೂ, ಅಂತಾರಾಷ್ಟ್ರೀಯವಾಗಿ ಮನ್ನಣೆ ಗಳಿಸುತ್ತಿದ್ದರೂ ಕೆಲವು ಸಾಮಾಜಿಕ ಸಂಗತಿಗಳಲ್ಲಿ ಇನ್ನೂ ಹಿಂದುಳಿದಿದೆ ಎಂಬುದಕ್ಕೆ ಈ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳೇ ಸಾಕ್ಷಿ. ಭಾರತದ ಬಡ, ಮಧ್ಯಮ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಹೆಣ್ಣು ಎಂಬುದು ವೆಚ್ಚದ ಬಾಬತ್ತು. ಜೊತೆಗೆ ವರದಕ್ಷಿಣೆಯೂ ಇನ್ನೊಂದು ಬಹುದೊಡ್ಡ ಕಾರಣ. ಹೀಗೆ ಲಿಂಗ ಅಸಮಾನತೆಯ ನಾನಾ ಕೇಡುಗಳು ಇದರ ಜೊತೆಗಿವೆ.

ಭ್ರೂಣ ಲಿಂಗ ಪತ್ತೆ ಮಾಡುವ ವೈದ್ಯರು, ಕ್ಲಿನಿಕ್‌ಗಳನ್ನು ಮೊದಲು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವ ಕೆಲಸ ಆಗಬೇಕು. ಹಣದ ದುರಾಶೆಯಿಂದ ಈ ಕೃತ್ಯ ಮಾಡುವ ವೈದ್ಯರು ಕ್ಷಮೆಗೆ ಅರ್ಹರಲ್ಲ. ಗರ್ಭದ ಸ್ಕ್ಯಾನಿಂಗ್‌ ಮಾಡುವ ವೇಳೆ ಲಿಂಗ ಪತ್ತೆ ಮಾಡಿ ಅದನ್ನು ನಿಗೂಢ ಪಾಸ್‌ವರ್ಡ್‌ಗಳ ಮೂಲಕ ಹೆತ್ತವರಿಗೆ ತಿಳಿಸುವ ಕ್ರಮ ಜಾರಿಯಲ್ಲಿದೆ. ಇದು ನಿಲ್ಲಬೇಕು. ಕಾನೂನು ರಕ್ಷಕರು, ಆರೋಗ್ಯ ಸೇವಾ ನಿರೀಕ್ಷಕರು ಈ ಬಗ್ಗೆ ಅಲರ್ಟ್‌ ಆಗಬೇಕು. ಅಕ್ರಮವಾಗಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಲ್ಲಿ ಭಾಗಿಯಾಗಿರುವವರೆಗ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಶಿಕ್ಷೆಯ ಜೊತೆಗೆ ಶಿಕ್ಷಣವೂ ತುಂಬ ಅಗತ್ಯವಾಗಿದೆ. ಹೆತ್ತವರಿಗೆ ವೃದ್ಧಾಪ್ಯದಲ್ಲಿ ಗಂಡು ಮಾತ್ರ ದಿಕ್ಕು, ಹೆಣ್ಣು ಮಗು ಏನಿದ್ದರೂ ಅನ್ಯರ ಮನೆ ಸೇರುವವಳು ಎಂಬ ಭಾವನೆ, ಆಕೆಯ ವಿದ್ಯಾಭ್ಯಾಸ ಇತ್ಯಾದಿಗಳಿಗೆ ಮಾಡುವ ಖರ್ಚೆಲ್ಲ ವ್ಯರ್ಥ ಎಂದು ತಿಳಿಯುವ ಜನರು ದೇಶದ ತುಂಬಾ ಇದ್ದಾರೆ. ಇಂದು ಹೆಣ್ಣು- ಗಂಡು ನಡುವೆ ಯಾವುದೇ ಭೇದವಿಲ್ಲ ಎಂಬುದನ್ನು ಇವರಿಗೆ ಮನದಟ್ಟು ಮಾಡಿಸಬೇಕಿದೆ. ದೇಶದಲ್ಲಿರುವ ಎಲ್ಲ ಧರ್ಮ, ಸಮುದಾಯ, ಪಂಥಗಳು, ಅಕ್ಷರಸ್ಥರು, ಅನಕ್ಷರಸ್ಥರು, ಶ್ರೀಮಂತರು-ಬಡವರ ವರ್ಗಗಳಲ್ಲಿ ಈ ಪಿಡುಗನ್ನು ಕಾಣಬಹುದು. ಇದಕ್ಕೆ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎಂಬ ಭೇದ ಭಾವವೂ ಇಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಡಿಜಿಟಲ್ ಜೀವನ ಪ್ರಮಾಣಪತ್ರ; ಕೇಂದ್ರದ ಜನಸ್ನೇಹಿ ಅಭಿಯಾನ ಶ್ಲಾಘನಾರ್ಹ

ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಈ ಹೆಣ್ಣು ಭ್ರೂಣ ಹತ್ಯೆ ತಡೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ. ಹೆಣ್ಣು ಮತ್ತು ಗಂಡು ನಡುವಿನ ಅಂತರವು ಗಣನೀಯವಾಗಿ ತಗ್ಗುತ್ತಿದೆ. ವರದಕ್ಷಿಣೆ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾನೂನು ಜಾರಿಯ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಬೇಟಿ ಬಚಾವ್ ಬೇಟಿ ಪಢಾವ್‌ನಂಥ ಕಾರ್ಯಕ್ರಮಗಳು ಜಾರಿಯಲ್ಲಿವೆ. ಹೆಣ್ಣು ಮಕ್ಕಳ ಶಿಕ್ಷಣ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಸಾಕಷ್ಟು ಆರ್ಥಿಕ ಪ್ರೋತ್ಸಾಹ ನೀಡಲಾಗುತ್ತಿದೆ. ಉನ್ನತ ಶಿಕ್ಷಣವರೆಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾನೂನು ಜಾರಿ, ಜಾಗೃತಿ ಜತೆಗೆ ತಂದೆ-ತಾಯಿಗಳ ಮನೋಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು.

Exit mobile version