ತುಮಕೂರು: ಒಬ್ಬಳೇ ಇದ್ದ ತನ್ನಜ್ಜಿ ಮನೆಗೆ ಬಂದ ಮೊಮ್ಮಗ ಆಶ್ರಯ ಪಡೆದಿದ್ದಲ್ಲದೆ, ಆಕೆಯನ್ನೇ ಹೊರದಬ್ಬಿದ್ದ ಪ್ರಕರಣವು ಉಪವಿಭಾಗಾಧಿಕಾರಿ ಮಧ್ಯಪ್ರವೇಶದ ಮೂಲಕ ಬಗೆಹರಿದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 3ನೇ ವಾರ್ಡ್‌ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈಗ 80 ವರ್ಷದ ಕಾವಲಮ್ಮ ಅವರಿಗೆ ಉಪವಿಭಾಗಾಧಿಕಾರಿ ನ್ಯಾಯ ಒದಗಿಸಿದ್ದಾರೆ.
ಏನಿದು ಪ್ರಕರಣ?
8 ತಿಂಗಳ ಹಿಂದೆ ಕಾವಲಮ್ಮ ಮಗಳಾದ ಲಕ್ಷ್ಮಮ್ಮ ಅವರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಈ ವೇಳೆ ಮಾರುತಿ ಅಜ್ಜಿ ಒಬ್ಬರೇ ಇದ್ದಾರೆ. ತನಗೂ ಆಶ್ರಯವಾಗುತ್ತದೆ ಎಂದು ಬಂದು ಸೇರಿಕೊಂಡಿದ್ದ. ಬಂದವನೇ ಮನೆಯನ್ನು ಆಕ್ರಮಿಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಅಜ್ಜಿಯನ್ನು ಮನೆಯಿಂದ ಹೊರದಬ್ಬಿದ್ದ. ಕಾವಲಮ್ಮ ಎಷ್ಟೇ ಅಂಗಲಾಚಿದರೂ ಆತ ಕೇಳಲೇ ಇಲ್ಲ.
ವಿಧಿಯಿಲ್ಲದೆ ಕಾವಲಮ್ಮ ಅವರು 8 ತಿಂಗಳಿನಿಂದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ವಿಚಾರ ತಿಳಿದ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಉಪ ವಿಭಾಗಾಧಿಕಾರಿ ರಿಶಿ ಆನಂದ್ ಅವರು, ಮಾರುತಿ ಮೇಲೆ ಕ್ರಮ ಕೈಗೊಂಡಿದ್ದು, ವೃದ್ದೆಗೆ ಮನೆ ಬಿಡಿಸಿಕೊಂಡುವಂತೆ ಆದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ: Union Budget 2023: ಯಾವುದು ತುಟ್ಟಿ, ಯಾವುದು ಅಗ್ಗ?
ಎಸಿ ಅವರ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ. ತಹಸೀಲ್ದಾರ್, ಪೊಲೀಸರ ಸಮಕ್ಷಮದಲ್ಲಿ ಕಾವಲಮ್ಮ ತನ್ನ ಮನೆ ಸೇರಿದ್ದಾರೆ. ಅಲ್ಲದೆ, ಅಧಿಕಾರಿಗಳ ಕ್ರಮಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಮಾರುತಿ ಆ ಮನೆಯನ್ನು ಮಾರಾಟ ಮಾಡಲು ಹೊಂಚು ಹಾಕಿದ್ದ ಎಂಬ ಸಂಗತಿಯೂ ಬಹಿರಂಗವಾಗಿದೆ.