ಬೆಂಗಳೂರು: ಇಂದು ಪ್ರಾಮಾಣಿಕರು ವಿರಳರಾಗಿದ್ದಾರೆ ಎಂಬ ಮಾತುಗಳ ಮಧ್ಯೆಯೂ ಅಲ್ಲಲ್ಲಿ ಅಂತಹ ಮಾನವೀಯ ಗುಣವುಳ್ಳವರು ಸಿಗುತ್ತಲೇ ಇದ್ದಾರೆ. ಈ ದಾರಿಯಲ್ಲಿರುವ ಕಾನ್ಸ್‌ಟೇಬಲ್ ಅಂಜನ್ ಕುಮಾರ್ ಎಂಬುವರು ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರವನ್ನು ವಾಪಸ್ ನೀಡುವ ಮೂಲಕ ಪ್ರಾಮಾಣಿಕತೆಯನ್ನು ಮೆರದಿದ್ದು, ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಎಆರ್ ಕಾನ್ಸ್‌ಟೇಬಲ್ ಅಂಜನ್ ಕುಮಾರ್ ಅವರು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಕಳೆದ ಏಳು ವರ್ಷಗಳಿಂದ ಗನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಟಿ ಮಾಲ್‌ನಲ್ಲಿ ಮಹಿಳೆಯೊಬ್ಬರು ಸರ ಕಳೆದುಕೊಂಡಿದ್ದರು. ಆ ಮಹಿಳೆಗೆ ಸರವನ್ನು ವಾಪಸ್ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಂಜನ್ ಕುಮಾರ್ ಅವರು ಮಾಲ್‌ಗೆ ಹೋದಾಗ ಮಹಿಳೆಯ ಚಿನ್ನದ ಸರ ಸಿಕ್ಕಿದೆ. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಅಂಗಡಿ ಮಾಲೀಕರಿಗೆ ತಿಳಿಸಿದ್ದಾರೆ. ಮಹಿಳೆಯನ್ನು ಶಾಪ್‌ಗೆ ಕರೆಸುವಂತೆ ಹೇಳಿ ಶಾಪ್‌ನಲ್ಲೇ ಮಹಿಳೆಗೆ ಸರವನ್ನು ಹಿಂದಿರುಗಿಸಿದ್ದಾರೆ.
ಸರವನ್ನು ಪಡೆದ ಅಶ್ವಿನಿ ಎಂಬ ಮಹಿಳೆಯು ಅಂಜನ್ ಕಮಾರ್ ಅವರ ಪ್ರಾಮಾಣಿಕತೆಯನ್ನು ಪೊಲೀಸ್ ಇಲಾಖೆಗೂ ತಿಳಿಸುವ ಪ್ರಯತ್ನದ ಭಾಗವಾಗಿ ಕಮಿಷನರ್‌ಗೆ ಪತ್ರವನ್ನು ಬರೆದಿದ್ದಾರೆ. ಅಂಜನ್ ಅವರ ಪ್ರಾಮಾಣಿಕತೆಯಿಂದ ಪೊಲೀಸ್ ಇಲಾಖೆಯ ಗೌರವ ಹೆಚ್ಚಾಗಿದ್ದು, ಇಲಾಖೆಗೆ ಹಾಗೂ ಅಂಜನ್ ಕುಮಾರ್‌ಗೆ ಧನ್ಯವಾದ ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ; ಇಲ್ಲಿವೆ ಎರಡು ಉದಾಹರಣೆ!