ಶಿವಮೊಗ್ಗ: ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಕಳೆದ ೮ ವರ್ಷಗಳಿಂದ ಗುಡಿಸಲು ಹಾಕಿಕೊಂಡಿದ್ದ ಹಕ್ಕಿಪಿಕ್ಕಿ ಜನಾಂಗದವರು ಈಗ ಅಕ್ಷರಶಃ ಕಂಗೆಟ್ಟಿದ್ದಾರೆ. ಗುಡಿಸಲು ತೆರವು ಕಾರ್ಯಾಚರಣೆಗೆ ಮುಂದಾಗಲಾಗಿದ್ದು, ಪ್ರಾಣಕೊಟ್ಟೇವು, ಜಾಗ ಬಿಡೆವು ಎಂದು ರಸ್ತೆಗೆ ಅಡ್ಡಲಾಗಿ ಮಲಗಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಲ್ಲಿನ ಮಲ್ಲಿಗೆನಹಳ್ಳಿ ಸಮೀಪದಲ್ಲಿರುವ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಸುಮಾರು ೮ ವರ್ಷಗಳಿಂದ ಹಕ್ಕಿಪಿಕ್ಕಿ ಜನಾಂಗದವರು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಇದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಆಗಿನಿಂದಲೇ ಅವರನ್ನು ಸ್ಥಳದಿಂದ ಎಬ್ಬಿಸುವ ಸಂಬಂಧ ಸಾಕಷ್ಟು ಪ್ರಯತ್ನಗಳು ಆಗಿದ್ದವು. ಇದೇ ವೇಳೆ ಇವರಿಗೆ ಪರ್ಯಾಯ ಸ್ಥಳ ನೀಡಬೇಕೆಂಬ ಆಗ್ರಹಗಳೂ ಕೇಳಿಬಂದಿದ್ದವು. ಆದರೆ, ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಅವರಿಗೆ ಭರವಸೆಗಳನ್ನು ನೀಡುತ್ತಿದ್ದರೇ ವಿನಃ ಯಾವುದೇ ಪರ್ಯಾಯ ವಸತಿ ಸೌಕರ್ಯವನ್ನು ಮಾಡಿಕೊಟ್ಟಿರಲಿಲ್ಲ.
ನ್ಯಾಯಾಲಯ ಮೆಟ್ಟಿಲೇರಿದ್ದ ಪ್ರಕರಣ
ಸರ್ವೇ ನಂಬರ್ 18, 19ರ ಸರ್ಕಾರಿ ಜಮೀನು ಇದಾಗಿದ್ದು, ಹಕ್ಕಿಪಿಕ್ಕಿ ಜನಾಂಗದವರು ಅನಧಿಕೃತವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವರನ್ನು ಕೂಡಲೇ ತೆರವುಗೊಳಿಸಬೇಕೆಂದು ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಮಾರು 8.29 ಎಕರೆ ವಿಸ್ತೀರ್ಣವುಳ್ಳ ಈ ಜಾಗವು ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದಾಗಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಬಳಿಕ ಗುಡಿಸಲುಗಳ ತೆರವಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮಗಳ ಅಧಿಕಾರಿಗಳು ತೆರವಿಗೆ ಮುಂದಾಗಿದ್ದಾರೆ.
೧೨೮ ಮನೆ, ೨೫೦ಕ್ಕೂ ಹೆಚ್ಚು ಕುಟುಂಬ ವಾಸ
ಈ ಜಾಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, ಸುಮಾರು ೧೨೮ ಮನೆಗಳಿವೆ. ಇಲ್ಲಿನ ಜಾಗದಿಂದ ನಮ್ಮನ್ನು ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಮುಂದಿನ ಜೀವನ ಏನು? ನಮಗೆ ಇಲ್ಲಿಯೇ ಇರಲು ಅವಕಾಶ ಕೊಡಿ ಎಂದು ಗೋಗರೆದಿರುವ ನಿವಾಸಿಗಳು ತಮ್ಮ ಪ್ರಾಣ ಹೋದರೂ ಸರಿ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದು ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ | ಶಿವಮೊಗ್ಗ ಉಸ್ತುವಾರಿಗೆ ನಾರಾಯಣ ಗೌಡ ಸುಸ್ತು; ಎರಡು ಹುಲಿಗಳ ಮಧ್ಯೆ ಇರಲಾಗದೆ ಪೇಚಾಟ!