Site icon Vistara News

Karnataka Election: ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ; ನಾಗರಾಜ್ ಛಬ್ಬಿ‌ ಸೇರಿ ಹಲವರು ಪಕ್ಷಾಂತರ

The heat of rebellion in the Congress, Dissatisfied thinking of defection or independent contest

ಬೆಂಗಳೂರು: ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್‌ ಕೈತಪ್ಪಿರುವುದರಿಂದ ಹೈ ಕಮಾಂಡ್‌ ವಿರುದ್ಧ ಹಲವು ನಾಯಕರು ಅಸಮಾಧಾನ ಹೊರಹಾಕಿ ಪಕ್ಷಾಂತರವಾಗಿದ್ದಾರೆ. ಇನ್ನು ಕೆಲವರು ಪಕ್ಷಾಂತರವಾಗಲು ಅಥವಾ ಸ್ವತಂತ್ರವಾಗಿ ಸ್ಪರ್ಧೆ (Karnataka Election) ಮಾಡಲು ಚಿಂತನೆ ಮಾಡುತ್ತಿದ್ದಾರೆ. ಹೀಗಾಗಿ ಬಂಡಾಯ ನಾಯಕರನ್ನು ಮನವೊಲಿಕೆ ಮಾಡುವುದು ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾಗಿದೆ.

ಕಾಂಗ್ರೆಸ್‌ ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆ

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷದ ನಾಯಕ, ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೋವಿಂದ ಕಾರಜೋಳ ಸಮ್ಮುಖದಲ್ಲಿ ನಾಗರಾಜ್ ಛಬ್ಬಿ ಕಮಲ ಪಾಳಯ ಸೇರಿದ್ದಾರೆ.

‌ಡಿ.ಕೆ. ಶಿವಕುಮಾರ್ ಬಣದಲ್ಲಿ ಕಾಣಿಸಿಕೊಂಡಿದ್ದ ನಾಗರಾಜ್ ಛಬ್ಬಿ ಕಲಘಟಗಿ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್‌ನಿಂದ ಸಂತೋಷ್ ಲಾಡ್‌ಗೆ ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡು ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | D.K. Shivakumar: ಆರೋಗ್ಯ ಇಲಾಖೆಯಲ್ಲಿ ಡಾ. ಸುಧಾಕರ್‌ ಭ್ರಷ್ಟಾಚಾರ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್‌ ಆರೋಪ

ಕಡೂರು ಕ್ಷೇತ್ರದಿಂದ ವೈ.ಎಸ್.ವಿ.ದತ್ತಾ ಸ್ವತಂತ್ರವಾಗಿ‌ ಸ್ಪರ್ಧೆ

ಚಿಕ್ಕಮಗಳೂರು: ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಕಡೂರು ಕ್ಷೇತ್ರದಲ್ಲಿ ಕೆ.ಎಸ್‌.ಆನಂದ್‌ಗೆ ಟಿಕೆಟ್‌ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿ, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಕಡೂರು ನಗರದಲ್ಲಿ ಸಾವಿರಾರು ಕಾರ್ಯಕರ್ತರ ಜತೆ ಮೆರವಣಿಗೆ ನಡೆಸಿದ ಬಳಿಕ ಸ್ವಾಭಿಮಾನಿ ಸಭೆ ನಡೆಸಿ ಚುನಾವಣೆ ಖರ್ಚಿಗಾಗಿ ಭಿಕ್ಷೆ ಬೇಡಿದರು. ಹೆಗಲ ಮೇಲೆ ಟವೆಲ್ ಹಾಕಿಕೊಂಡು ಭಿಕ್ಷೆ ಬೇಡಿದಾಗ, ಅಭಿಮಾನಿಗಳು 50 ಸಾವಿರ ರೂ., 1 ಲಕ್ಷ ರೂ. , 2 ಲಕ್ಷ ರೂಪಾಯಿ ಚೆಕ್‌ ಚೆಕ್ ನೀಡಿ, ಮತ್ತಷ್ಟು ಹಣ ಕೊಡುತ್ತೇವೆ, ನೀವು ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಅಭಿಮಾನಿಗಳು ಬೆಂಬಲ ನೀಡಿದರು. ‌

ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತ ರಘು ಆಚಾರ್‌ ಜೆಡಿಎಸ್‌ ಸೇರ್ಪಡೆ ಖಚಿತ

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ (karnataka Elections) ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತರಾದ ಮಾಜಿ ಎಂಎಲ್‌ಸಿ ರಘು ಆಚಾರ್‌ ಅವರ ಬಂಡಾಯವನ್ನು ನಿವಾರಿಸುವ ಪ್ರಯತ್ನ ವಿಫಲವಾಗಿದ್ದು, ಅವರು ಜೆಡಿಎಸ್‌ ಸೇರುವುದು ಖಚಿತವಾಗಿದೆ.

ಎರಡನೇ ಪಟ್ಟಿಯಲ್ಲಿ ಚಿತ್ರದುರ್ಗದ ಟಿಕೆಟ್‌ ಪ್ರಕಟವಾಗಿದ್ದು, ಅದರಲ್ಲಿ ಚಿತ್ರದುರ್ಗಕ್ಕೆ ವೀರೇಂದ್ರ ಪಪ್ಪಿ ಅವರ ಹೆಸರಿತ್ತು. ಇದರಿಂದ ಕೆರಳಿದ ರಘು ಆಚಾರ್‌ ಅವರು ʻನಾನು ದುರ್ಗದಿಂದ ಸ್ಪರ್ಧೆ ಮಾಡೋದು ಖಚಿತ. ನಾನು ಏಪ್ರಿಲ್‌ 17ಕ್ಕೆ ನಾಮಪತ್ರ ಸಲ್ಲಿಸುವುದು ಪಕ್ಕಾʼʼ ಎಂದು ಘೋಷಿಸಿದ್ದರು. ಹೀಗಾಗಿ ಅವರು ಏ.14ರಂದು ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಅಫಜಲಪುರದಲ್ಲಿ ಭಿನ್ನಮತ

ಕಲಬುರಗಿ: ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅಫಜಲಪುರದಲ್ಲಿ ಶಾಸಕ ಎಂ.ವೈ.ಪಾಟೀಲ್‌ಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅತೃಪ್ತರು ಪ್ರತ್ಯೇಕವಾಗಿ ಬಹಿರಂಗ ಸಭೆ ನಡೆಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್‌ಗೆ ಚುನಾವಣೆಯಲ್ಲಿ ಬೆಂಬಲ ನೀಡದಿರಲು ಮುಖಂಡರು ತೀರ್ಮಾನಿಸಿದ್ದಾರೆ.

ಇನ್ನು ಬಿಜೆಪಿಯಲ್ಲಿ ಮಾಲೀಕಯ್ಯ ಗುತ್ತೇದಾರ ಅಫಜಲಪುರ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರ ಸಹೋದರ ನಿತಿನ್ ಗುತ್ತೇದಾರ್‌ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ನಿತಿನ್‌ ಗುತ್ತೇದಾರ್ ಟಿಕೆಟ್ ಸಿಗದೆ ಸ್ವತಂತ್ರವಾಗಿ ಸ್ಪರ್ಧಿಸಿದರೆ‌ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್‌ನ ಅತೃಪ್ತ ನಾಯಕರು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ | D ಕೋಡ್‌ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?

ತರೀಕೆರೆ ಕ್ಷೇತ್ರದ ಟಿಕೆಟ್‌ಗಾಗಿ ಮುಂದುವರಿದ ಫೈಟ್

ಚಿಕ್ಕಮಗಳೂರು: ತರೀಕೆರೆ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ಫೈಟ್ ಮುಂದುವರಿದಿದೆ. ಲಿಂಗಾಯತ ಸಮುದಾಯದ ದೊರನಾಳ್ ಪರಮೇಶ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅಜ್ಜಂಪುರ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರ ಒತ್ತಾಯದ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್‌ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆಬಿಸಿಯಾಗಿದೆ.

Exit mobile version