Site icon Vistara News

ಪ್ರವೇಶದ್ವಾರ ನಿರ್ಮಾಣ ವಿಚಾರಕ್ಕೆ 2 ಕೋಮುಗಳ ನಡುವೆ ಸಂಘರ್ಷ; ಭಟ್ಕಳದಲ್ಲಿ ಉದ್ವಿಗ್ನ ಸ್ಥಿತಿ

ಭಟ್ಕಳದಲ್ಲಿ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಸ್ತೆಗೆ ಪ್ರವೇಶದ್ವಾರ ನಿರ್ಮಾಣ ವಿಚಾರಕ್ಕೆ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿದೆ. ಸಮುದಾಯ ದೇವಸ್ಥಾನದ ಪ್ರವೇಶದ್ವಾರ ನಿರ್ಮಿಸಲು ಮುಂದಾದ ಬೆನ್ನಲ್ಲೇ ಇನ್ನೊಂದು ಸಮುದಾಯ ಟಿಪ್ಪು ಸುಲ್ತಾನ್ ಗೇಟ್‌ ಹೆಸರಿನಲ್ಲಿ ಕಮಾನು ನಿರ್ಮಿಸಲು ಮುಂದಾಗಿದ್ದರಿಂದ, ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಭಟ್ಕಳ ಪಟ್ಟಣದ ಸೋನಾರಕೇರಿಯ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಸ್ವಂತ ಹಣದಲ್ಲಿ ಪ್ರವೇಶದ್ವಾರ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಹೀಗಾಗಿ ದೇವಸ್ಥಾನ ಸಮಿತಿ ಸಹಕಾರದೊಂದಿಗೆ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಪ್ರವೇಶದ್ವಾರದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿತ್ತು. ಕಳೆದ ಹತ್ತು ದಿನದ ಹಿಂದೆ ಕಾಮಗಾರಿ ಪ್ರಾರಂಭವಾಗಿದ್ದು, ಈಗಾಗಲೇ ಎರಡೂ ಬದಿಯ ಪಿಲ್ಲರ್ ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ | Vims Bellary | ವಿಮ್ಸ್‌ ಐಸಿಯು ಪವರ್‌ ಕಟ್‌; ತನಿಖೆ ಚುರುಕು, ಸರ್ಕಾರಕ್ಕೆ ಶೀಘ್ರ ವರದಿ?

ಆದರೆ ರಸ್ತೆಗೆ ನಿರ್ಮಿಸಲಾಗುತ್ತಿರುವ ಪ್ರವೇಶದ್ವಾರಕ್ಕೆ ಭಟ್ಕಳ ಪುರಸಭೆಯಿಂದ ಯಾವುದೇ ಪರವಾನಗಿ ಪಡೆದಿಲ್ಲ ಎಂದು ಅನ್ಯಕೋಮಿನವರು ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟಾದರೂ ಕಾಮಗಾರಿ ಪ್ರಾರಂಭಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ಈ ಕಾರಣದಿಂದ ದೇವಸ್ಥಾನದಿಂದ ನೂರು ಮೀಟರ್ ಅಂತರದಲ್ಲಿರುವ ದರ್ಗಾಕ್ಕೆ ರಸ್ತೆಯ ಇನ್ನೊಂದು ಬದಿಯಿಂದ, ಅಂದರೆ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಸುಲ್ತಾನ್ ಸ್ಟ್ರೀಟ್‌ ರಸ್ತೆ ಮದ್ಯದಲ್ಲಿ ಟಿಪ್ಪು ಸುಲ್ತಾನ್ ಗೇಟ್‌ ಹೆಸರಿನಲ್ಲಿ ಪ್ರವೇಶದ್ವಾರ ನಿರ್ಮಾಣ ಮಾಡಲು ಇನ್ನೊಂದು ಸಮುದಾಯದವರು ಮುಂದಾಗಿದ್ದರು. ಇದು ಪರೋಕ್ಷವಾಗಿ ಎರಡೂ ಕೋಮುಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ಪ್ರವೇಶದ್ವಾರ ನಿರ್ಮಾಣ ಎರಡೂ ಸಮುದಾಯವರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.

ದೇವಸ್ಥಾನಕ್ಕೆ ಪ್ರವೇಶದ್ವಾರ ನಿರ್ಮಾಣ ವಿಚಾರವಾಗಿ ಎರಡು ತಿಂಗಳ ಹಿಂದೆಯೇ ದೇವಸ್ಥಾನ ಸಮಿತಿಯವರು ಪುರಸಭೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡು ತಿಂಗಳು ಕಳೆಯುತ್ತಾ ಬಂದರೂ ಪುರಸಭೆಯಿಂದ ಯಾವುದೇ ಉತ್ತರ ಬಾರದ ಹಿನ್ನಲೆ ಕಾಮಗಾರಿಯನ್ನು ಪ್ರಾರಂಭಿಸಿದ್ದಾಗಿ ಹಿಂದು ಸಂಘಟನೆಗಳು ಹೇಳಿಕೊಂಡಿವೆ. ಅಲ್ಲದೇ 800 ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿರುವ ವೆಂಕಟರಮಣ ದೇವಸ್ಥಾನಕ್ಕೆ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಇದಕ್ಕೆ ಅನ್ಯಕೋಮಿನವರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ನಾಮಧಾರಿ ಸಮುದಾಯದ ಅಧ್ಯಕ್ಷ ಕೃಷ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವೇಶದ್ವಾರ ನಿರ್ಮಾಣ ವಿಚಾರ ಎರಡು ಸಮುದಾಯಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾದ ಹಿನ್ನಲೆ ಪುರಸಭೆ ಮದ್ಯಪ್ರವೇಶಿಸಿದೆ. ಎರಡೂ ಸಮುದಾಯಗಳೂ ಪ್ರವೇಶದ್ವಾರ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆಯದಿರುವ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಕಾಮಗಾರಿಗೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಸುರೇಶ್.ಎಂ ಬ್ರೇಕ್ ಹಾಕಿದ್ದಾರೆ. ಭಟ್ಕಳ ನಗರ ಠಾಣೆಯಲ್ಲಿ ಎರಡೂ ಕೋಮುಗಳ ಮುಖಂಡರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಶಾಂತಿ ಭಂಗದಡಿ ದೂರು ದಾಖಲಿಸಿದ್ದು, ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನಕ್ಕೆ ಪ್ರವೇಶದ್ವಾರ ನಿರ್ಮಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ನಮಗೂ ಟಿಪ್ಪು ಸುಲ್ತಾನ್ ಗೇಟ್‌ ನಿರ್ಮಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಿ. ಟಿಪ್ಪು ಗೇಟ್‌ ನಿರ್ಮಾಣಕ್ಕೆ ವಿರೋಧ ಮಾಡಿದರೆ, ನಾವೂ ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣಕ್ಕೆ ವಿರೋಧ ಮಾಡುತ್ತೇವೆ
| ಮೆಡಿಕಲ್ ಸಮಿ, ಮುಸ್ಲಿಂ ಮುಖಂಡ, ಭಟ್ಕಳ

ಇದನ್ನೂ ಓದಿ | Modi Birthday | ಮೈಸೂರು, ಬೆಳಗಾವಿ, ಶಿವಮೊಗ್ಗದಲ್ಲಿ ಮೋದಿ ಮೇನಿಯಾ; ಬಿಜೆಪಿಯಿಂದ ವಿಶೇಷ ಕಾರ್ಯಕ್ರಮ

Exit mobile version